ಸಿದ್ದಾಪುರ, ಸೆ. 1: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಅತ್ತಿಮಂಗಲ ಬಳಿ ರಸ್ತೆ ಬದಿಯಲ್ಲಿ ಸಾರ್ವಜನಿಕರು ಸುರಿದ ಕಸದ ರಾಶಿಯನ್ನು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಾತ್ರಿ ಸಮಯದಲ್ಲಿ ಕಾಡಾನೆಗಳು ಎಳೆದು ಹಾಕಿದ್ದವು. ಈ ಕುರಿತು ಇಂದು ವರದಿ ಕೂಡ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಇಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್‍ಕುಮಾರ್ ನೇತೃತ್ವ ದಲ್ಲಿ ಪೌರಕಾರ್ಮಿಕರು ಕಸ ತ್ಯಾಜ್ಯ ಗಳನ್ನು ತೆಗೆದು ಸ್ವಚ್ಛಗೊಳಿಸಿದರು. ರಸ್ತೆ ಬದಿಯಲ್ಲಿ ಕಸ ಸುರಿಯುವ ವ್ಯಕ್ತಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಗ್ರಾ.ಪಂ. ವತಿಯಿಂದ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಕಸ ಸುರಿಯುವ ವ್ಯಕ್ತಿಗಳು ಪತ್ತೆಯಾದಲ್ಲಿ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್‍ಕುಮಾರ್ ತಿಳಿಸಿದ್ದಾರೆ.