ಮಡಿಕೇರಿ, ಆ. 31 : ಮಲಯಾಳಿ ಸಮುದಾಯದವರ ಪ್ರಮುಖ ಹಬ್ಬವಾಗಿರುವ ತಿರುಓಣಂ ಹಬ್ಬವನ್ನು ಜಿಲ್ಲೆಯಾದ್ಯಂತ ನೆಲೆಸಿರುವ ಮಲಯಾಳಿ ಸಮುದಾಯದವರು ಸರಳವಾಗಿ ಅಚರಿಸಿದರು. ಓಣಂನ ಪ್ರಮುಖ ಆಕರ್ಷಣೆಯಾಗಿರುವ ಹೂವಿನ ರಂಗೋಲಿಯನ್ನು ಮನೆ ಮುಂದೆ ಬಿಡಿಸಿ, ಹೊಸ ಉಡುಪು ತೊಟ್ಟು ವಿಶೇಷ ಪೂಜೆ ನೆರವೇರಿಸಿ ಮಹಾಬಲಿ ಚಕ್ರವರ್ತಿಯನ್ನು ಸ್ಮರಿಸಿದರು. ವಿಧ ವಿಧದ ಖಾದ್ಯಗಳನ್ನು ತಯಾರಿಸಿ, ಸೇವಿಸಿ ಸಂಭ್ರಮಿಸಿದರು. ಮನೆ ಮನೆಗಳಲ್ಲಿ ಹಬ್ಬ ಆಚರಿಸಿ ಸಂಭ್ರಮಿಸಿದರೆ, ಕೆಲೆವೆಡೆ ಸಂಘಟನೆಗಳ ಮೂಲಕವೂ ಸರಳ ಆಚರಣೆ ನಡೆಯಿತು. ಮಡಿಕೇರಿ ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಆಚರಣೆ ಕಂಡು ಬಂದಿತು.ಸೋಮವಾರಪೇಟೆ : ಓಣಂ ಹಬ್ಬವನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಲೆಯಾಳಿ ಸಮುದಾಯದವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.ಮಲೆಯಾಳಿ ಸಮುದಾಯ ದವರಿಗೆ ಓಣಂ ವಿಶಿಷ್ಟ ಹಬ್ಬವಾಗಿದ್ದು, ಮನೆಯ ಮುಂದೆ ಬಗೆಬಗೆಯ ಹೂವುಗಳಿಂದ ಪೂಕಳಂ ರಚಿಸಿ ಓಣಂ ಹಬ್ಬವನ್ನು ಸಂಭ್ರಮಿಸಿದರು. ನೆಂಟರಿಷ್ಟರು, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ, ಓಣಂ ವಿಶೇಷದ ಖಾದ್ಯಗಳನ್ನು
(ಮೊದಲ ಪುಟದಿಂದ) ನೀಡಿ, ಹಬ್ಬದ ಶುಭಾಶಯ ಕೋರಿದರು. ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಇಲ್ಲಿನ ಮುತ್ತಪ್ಪ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ಆಲೇಕಟ್ಟೆ ರಸ್ತೆಯ ಪದ್ಮಕ್ಯಾಂಟೀನ್ ಮಾಲೀಕರಾದ ಪ್ರೇಮ್ ಮತ್ತು ಕುಟುಂಬದವರು ತಮ್ಮ ಮನೆಯ ಮುಂದೆ ಪೂಕಳಂ ರಚಿಸಿ ಸಂಭ್ರಮಿಸಿದರು. ಇದರೊಂದಿಗೆ ಮಲೆಯಾಳಿ ಸಮುದಾಯದ ಮಂದಿ ತಮ್ಮ ಮನೆಯಂಗಳದಲ್ಲಿ ಕಣ್ಮನ ಸೆಳೆಯುವ ಪೂಕಳಂಗಳನ್ನು ರಚಿಸಿ ಮಹಾಬಲಿ ಚಕ್ರವರ್ತಿಯನ್ನು ಸ್ಮರಿಸಿದರು.
ಕಣಿವೆ: ಕೇರಳೀಯರ ಪ್ರಮುಖ ಆಚರಣೆಗಳಲ್ಲಿ ಒಂದಾದ ಓಣಂ ಹಬ್ಬವನ್ನು ಸೋಮವಾರ ಕಣಿವೆ ಭಾಗದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಸಂತಸದಲ್ಲಿ ಬೆಳಗಾಗಿ ಬೇಗೆದ್ದು ಮನೆಗಳ ಅಂಗಗಳನ್ನು ಸ್ವಚ್ಛಗೊಳಿಸಿದ ಮಹಿಳೆಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಮನೆಯಂಗಳದಲ್ಲಿ ವಿವಿಧ ವರ್ಣಗಳಿಂದ ಅಲಂಕೃತವಾದ ರಂಗೋಲಿಯನ್ನು ಪುಷ್ಪಗಳಿಂದ ಬಿಡಿಸಿ ಅದರ ಮಧ್ಯದಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚಿ ಭಕ್ತಿ ಭಾವದಿಂದ ಬಲಿಚಕ್ರವರ್ತಿ ದೇವನಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿಯ ಬದುಕನ್ನು ನೀಡೆಂದು ಪ್ರಾರ್ಥಿಸಿದರು. ಮುಳ್ಳುಸೋಗೆಯ ಕಾವೇರಿ ನದಿ ತೀರವೊಂದರ ರಸ್ತೆಯಲ್ಲಿ ವಹನ ವಿಶ್ವನಾಥ್ ಎಂಬವರ ಕುಟುಂಬ ಸದಸ್ಯರು ಸಾಮೂಹಿಕವಾಗಿ ಪುಷ್ಪರಂಗೋಲಿ ರಚಿಸಿ ಸಂಭ್ರಮಿಸಿದರು.
ಕೂಡಿಗೆ : ಕೂಡಿಗೆ ವ್ಯಾಪ್ತಿಯ ಕೂಡುಮಂಗಳೂರು, ಕೂಡಿಗೆ, ಸೀಗೆಹೊಸೂರು, ಮದಲಾಪುರ, ಹಾರಂಗಿ, ಮುಳ್ಳುಸೋಗೆ, ಕುಶಾಲನಗರದಲ್ಲಿ ಓಣಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು.
ಕೇರಳ ಭಾಷಿಗರು ತಮ್ಮ ಮನೆಗಳ ಮುಂದೆ ಅತ್ಯಾಕರ್ಷಕ ಹೂವಿನ ರಂಗೋಲಿ ಹಾಕುವುದರ ಮೂಲಕ ಪೂಜೆ ಸಲ್ಲಿಸಿದರು. ನಂತರ ಮಕ್ಕಳಿಂದ ಹಿಡಿದು ದೂಡ್ಡವರವರೆಗೆ ಹೊಸ ಬಟ್ಟೆಗಳನ್ನು ಧರಿಸಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದುದ್ದು ಕಂಡುಬಂದಿತು. ನಂತರ ಮನೆಗಳಲ್ಲಿ ಓಣಂ ಹಬ್ಬದ ವಿಶೇಷ ತಿಂಡಿಗಳನ್ನು ತಯಾರಿಸಿ ಸಹ ಭೋಜನ ಮಾಡಿದರು.
ಮುಳ್ಳೂರು : ಶನಿವಾರಸಂತೆ ವ್ಯಾಪ್ತಿಯಲ್ಲಿರುವ ಮಲಿಯಾಳಿ ಬಾಂಧವರು ಓಣಂ ಹಬ್ಬವನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮತ್ತು ಸಂಪ್ರದಾಯದಂತೆ ಆಚರಿಸಿದರು.ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮಾಲಂಬಿ, ಕಣಿವೆಬಸವನಹಳ್ಳಿ, ಹೊಸಗುತ್ತಿ, ಮುಳ್ಳೂರು, ನಿಡ್ತ, ಗೋಪಾಲಪುರ, ದುಂಡಳ್ಳಿ ಮುಂತಾದ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಲೆಯಾಳಿ ಬಾಂಧವರು ಅನೇಕ ವರ್ಷಗಳಿಂದ ನೆಲೆಸಿದ್ದಾರೆ. ಪ್ರತಿವರ್ಷ ಈ ವ್ಯಾಪ್ತಿಯಲ್ಲಿ ಓಣ ಹಬ್ಬವನ್ನು ಸಡಗರ ಸಂಭ್ರಮದಿಂದ, ಅಕ್ಕಪಕ್ಕದ ಮನೆಯವರನ್ನು ಕರೆದು ಸಾಮೂಹಿಕವಾಗಿ ಆಚರಿಸಿ ಸಂಭ್ರಮ ಪಡುತ್ತಿದ್ದರು. ಬೆಳಿಗ್ಗೆ ಓಣಂ ಹಬ್ಬದ ಸಂಪ್ರದಾಯದಂತೆ ತಮ್ಮ ಮನೆಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ತರುವಾಯ ಮನೆ ಅಂಗಳದಲ್ಲಿ ಹೂವಿನ ರಂಗೋಲಿ ಬಿಡಿಸಿ ಮಧ್ಯದಲ್ಲಿ ಹಣತೆಯನ್ನಿಟ್ಟು ಪೂಜಿಸಿ ತದನಂತರ ಸಿಹಿ ಅಡುಗೆ ಮಾಡಿ ಊಟ ಮಾಡುವುದರ ಮೂಲಕ ಹಬ್ಬವನ್ನು ಸರಳವಾಗಿ ಆಚರಿಸಿದರು.
ಗುಡ್ಡೆಹೊಸೂರು : ಓಣಂ ಹಬ್ಬದ ಪ್ರಯುಕ್ತ 10 ದಿನಗಳಿಂದ ತಮ್ಮ ಮನೆಯ ಮುಂದೆ ಹೂವಿನ ರಂಗೋಲಿ "ಪೂಕಳಂ" ಅನ್ನು ಬಿಡಿಸಲಾಗುತ್ತದೆ. ಅದರಂತೆ ಗುಡ್ಡೆಹೊಸೂರಿನ ವಿವಿಧ ಭಾಗದಲ್ಲಿ ಮತ್ತು ಬೆಟ್ಟಗೇರಿಯ ಅಂಬಾಡಿ ಸಹೋದರರ ಮನೆ ಮತ್ತು ರಮೇಶ್ ಆಚಾರ್ ಸಹೋದರರ ಮನೆಯ ಮುಂದೆ ಹೂವಿನ ರಂಗೋಲಿ ನೋಡುಗರನ್ನು ಆಕರ್ಷಿಸುತ್ತಿತ್ತು. ಗುಡ್ಡೆಹೊಸೂರಿನ ರಮೇಶ್ ಪುತ್ರಿ ವಿಸ್ಮಯ ರಚಿಸಿದ ಹೂವಿನ ರಂಗೋಲಿ ಆಕರ್ಷಕವಾಗಿತ್ತು.
ಶನಿವಾರಸಂತೆ: ಪಟ್ಟಣ ಹಾಗೂ ಹೋಳಿಯಾದ್ಯಂದ ತಿಯರ್, ನಾಯರ್ ಇತ್ಯಾದಿ ಮಲೆಯಾಳಿ ಭಾಷಿಗ ಸಮುದಾಯದವರು ತಿರು ಓಣಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಸಂಪ್ರದಾಯಬದ್ಧವಾಗಿ ಆಚರಿಸಿ ಸಂಭ್ರಮಿಸಿದರು. ಕೇರಳದ ನಾಡ ಹಬ್ಬವೆಂದೇ ಪರಿಚಿತರಾಗಿರುವ ಓಣಂ ಹಬ್ಬವನ್ನು ಇಂದು ಜಾತಿ-ಮತ, ಧರ್ಮ ಬೇಧವಿಲ್ಲದೆ ಎಲ್ಲರೂ ಸಾಮಾನ್ಯವಾಗಿ ಆಚರಿಸುತ್ತಾರೆ.
ಶಿರಂಗಾಲ ಗ್ರಾಮದ ಶೋಭಾ-ಜೆ.ಕೆ. ವೇಲಾಯುಧನ್ ಕುಟುಂಬಸ್ಥರು ಓಣಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಸಂಭ್ರಮದಿಂದ ಆಚರಿಸಿದರು. ಕುಟುಂಬ ಸದಸ್ಯರೆಲ್ಲಾ ಜ್ಯೋತಿ ಬೆಳಗಿಸಿ ಕೊರೊನಾ ಮುಕ್ತ ವಾತಾವರಣವನ್ನು ದಯಪಾಲಿಸುವಂತೆ ಹಾಗೂ ಸಮುದಾಯದವರು ಸಾಮೂಹಿಕವಾಗಿ ಸಂತಸದಿಂದ ಆಚರಿಸುವ ಸಂದರ್ಭ ಮರಳಿ ಬರುವಂತೆ ಕೋರಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಓಣಂ ಹಬ್ಬ ಕುಟುಂಬಸ್ಥರು ಮಾತ್ರವಲ್ಲ, ಬಂಧುಬಳಗದವರೆಲ್ಲ ಸೇರಿ ಶಕ್ತಿ ಮೀರಿ ಸಂಭ್ರಮದಿಂದ ಹಾಗೂ ವಿಜೃಂಭಣೆಯಿಂದ ಆಚರಿಸುವ ಹಬ್ಬವಾಗಿದೆ. ಆದರೆ ಈ ಬಾರಿ ಕೋವಿಡ್-19 ಹಿನ್ನೆಲೆ ಕುಟುಂಬ ಸದಸ್ಯರು ಮಾತ್ರ ಮನೆಯಲ್ಲಿ ಆಚರಿಸುವಂತಾಯಿತು ಎಂದು ಜೆ.ಕೆ. ವೇಲಾಯುಧನ್ ಅಭಿಪ್ರಾಯಪಟ್ಟರು.