ಮಡಿಕೇರಿ, ಆ. 31: ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಹಾಗೂ ಹಸಿರು ದಳ ಸಂಸ್ಥೆಗಳು, ಜಿಲ್ಲಾ ಪಂಚಾಯತ್ ಜೊತೆ ಕೈಜೋಡಿಸಿ, ಆರು ಟನ್ ಘನತ್ಯಾಜ್ಯವನ್ನು ಮೈಸೂರಿನ ಸಿಮೆಂಟ್ ಫ್ಯಾಕ್ಟರಿ ಒಂದಕ್ಕೆ ರವಾನಿಸಿವೆ. ಇದು ಕೊಡಗಿನಲ್ಲಿ ಮಾಡುತ್ತಿರುವ ಪ್ರಥಮ ಪ್ರಯತ್ನ ಈ ಕುರಿತು ವಿವರ ತಿಳಿಸಿದ ಸಿಸಿಐ ಸದಸ್ಯ ಪವನ್ ಅಯ್ಯಣ್ಣ ಅವರು, ತಮ್ಮ ಸಂಸ್ಥೆ ಎರಡು ವರ್ಷಗಳಿಂದ ದಕ್ಷಿಣ ಕೊಡಗಿನಲ್ಲಿ ಹಸಿರು ಕ್ರಾಂತಿ, ತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿ ಹಾಗೂ (ಮೊದಲ ಪುಟದಿಂದ) ಶಾಲಾ - ಕಾಲೇಜುಗಳಿಗೆ ಭೇಟಿ ನೀಡುತ್ತಿರುವದಾಗಿ ಹೇಳಿದ್ದಾರೆ.‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಒಂದು ವರ್ಷದಿಂದ ಸಂಗ್ರಹಿತ ತ್ಯಾಜ್ಯವನ್ನು ಮೈಸೂರಿನ ತ್ಯಾಜ್ಯ ಬೇರ್ಪಡಿಕಾ ಕೇಂದ್ರಕ್ಕೆ ಕಳುಹಿಸುತ್ತಿದ್ದು, ಇದೀಗ ಪ್ರಥಮ ಬಾರಿಗೆ ಘನತ್ಯಾಜ್ಯವನ್ನು ಸಿಮೆಂಟ್ ಫ್ಯಾಕ್ಟರಿಗೆ ಕಳುಹಿಸುತ್ತಿರುವದಾಗಿ ತಿಳಿಸಿದರು. ಘನ ತ್ಯಾಜ್ಯವನ್ನು ಕುಟ್ಟ, ತಿತಿಮತಿ, ಪೊನ್ನಂಪೇಟೆ, ಗೋಣಿಕೊಪ್ಪಲು, ಪಾಲಿಬೆಟ್ಟ, ಚೆನ್ನಯ್ಯನಕೋಟೆ ಹಾಗೂ ಸಿದ್ದಾಪುರ ಗ್ರಾಮ ಪಂಚಾಯತ್ಗಳಿಂದ ಸಂಗ್ರಹಿಸಲಾಗುತ್ತಿದೆ. ಜಾಗೃತಿ ಮೂಡಿಸುತ್ತಿರುವ ಸಿಸಿಐ ವೈಜ್ಞಾನಿಕ ಸಲಹೆಗಾಗಿ ಬೆಂಗಳೂರಿನ ಎನ್ಜಿಒ ಸಂಸ್ಥೆ, ಹಸಿರು ದಳದೊಂದಿಗೆ ಕೈಜೋಡಿಸಿದೆ.
ಅಮೇರಿಕಾದಲ್ಲಿರುವ ಕೊಡವ ಕೂಟವು ಧನ ಸಹಾಯ ಮಾಡುತ್ತಿರುವದಾಗಿ ಹೇಳಲಾಗಿದೆ. ಕಳೆದ ವರ್ಷ ಸಿಸಿಐ ಪೊನ್ನಂಪೇಟೆಯಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯ ಬಳಕೆ ಕುರಿತು ಮಾಹಿತಿ ಹಾಗೂ ಪ್ರದರ್ಶನ ಏರ್ಪಡಿಸಿತ್ತು.