ಗೋಣಿಕೊಪ್ಪ ವರದಿ, ಆ. 31 : ಕೊಟ್ಟಗೇರಿ ಗ್ರಾಮದ ಮುಖ್ಯ ರಸ್ತೆಯಲ್ಲಿಯೇ ಹುಲಿ ಹೆಜ್ಜೆ ಹಾಕುವ ಮೂಲಕ ಮುಂಜಾನೆ ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.

ಕೊಟ್ಟಗೇರಿ-ನಿಡುವಕೇರಿ ರಸ್ತೆಯಲ್ಲಿ ಸೋಮವಾರ ಮುಂಜಾನೆ ಅಲ್ಲಿನ ನಿವಾಸಿ ಬಾಚಮಾಡ ರಾಜೇಶ್ ಮುಂಜಾನೆ 6.45 ಸುಮಾರಿಗೆ ಕಾರ್‍ನಲ್ಲಿ ಬಾಳೆಲೆಗೆ ಬರುತ್ತಿದ್ದಾಗ ರಸ್ತೆಯ ಮಧ್ಯೆ ಹುಲಿ ನಡೆದುಕೊಂಡು ಹೋಗುತ್ತಿತ್ತು. ಗಾಬರಿಗೊಂಡ ಇವರು ಕಾರ್‍ಲೈಟ್ ನಂದಿಸಿದರು. ಇದರಿಂದ ಹುಲಿ ಸಮೀಪದ ತೋಟದ ಬರೆ ಏರಿ ಮೇಲೆ ಮಲಗಿಕೊಂಡು, ಇವರ ಚಲನ-ವಲನವನ್ನು ನೋಡಿಕೊಂಡು ಆಹಾರ ಅರಗಿಸಿಕೊಳ್ಳಲು ಮುಂದಾಯಿತು. ಅಲ್ಲಿಂದ ಕದಲಲ್ಲಿಲ್ಲ.

ನನಗೂ ಅದಕ್ಕೂ 10 ಅಡಿಗಳಷ್ಟು ಮಾತ್ರ ಅಂತರ ವಿತ್ತು. ಸುಮಾರು 3 ಅಡಿ ಎತ್ತರ, 5 ಅಡಿಗಳಷ್ಟು ಉದ್ದವಿರಬಹುದು. ಒಂದು ತಿಂಗಳ ಹಿಂದೆಯೂ ಕೂಡ ಇದೇ ಜಾಗದಲ್ಲಿ ಹುಲಿ ಇದೇ ರೀತಿ ದರ್ಶನ ನೀಡಿತ್ತು ಎಂದು ರಾಜೇಶ್ ಮಾಹಿತಿ ನೀಡಿದ್ದಾರೆ. ಪೊನ್ನಂಪೇಟೆ ವಲಯ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- ಸುದ್ದಿಪುತ್ರ.