ಕಣಿವೆ, ಆ. 30 : ಮೊಬೈಲ್ ನಿಂದಾಗಿ ಮಕ್ಕಳು ಕೆಟ್ಟರು ಎಂದು ಹೇಳೋದೋ... ಇಲ್ಲವೇ ಮೊಬೈಲ್ ಅನ್ನು ಮಕ್ಕಳು ಕೆಡಿಸಿದರು ಎಂದು ಹೇಳೋದು ತಿಳಿಯುತ್ತಿಲ್ಲ. ತಂತ್ರಜ್ಞಾನ ಮುಂದುವರೆದಷ್ಟ್ಟು ಅದನ್ನು ಒಳಿತಿಗಾಗಿ ಬಳಸಿಕೊಳ್ಳುವವರೂ ಇದ್ದಾರೆ. ಹಾಗೆಯೇ ಇರುವುದನ್ನು ಕಳೆದುಕೊಂಡವರೂ ಕೆಲವರಿದ್ದಾರೆ. ಇದೊಂದು ಮೊಬೈಲ್‍ನಲ್ಲಿ ಬಂದ ಸಂದೇಶವೊಂದರ ಕಥೆ. ತರುಣನೊಬ್ಬ ಮೊಬೈಲ್‍ನಲ್ಲಿ ಬಂದ ಆ ಒಂದು ಮೆಸೇಜ್‍ನಿಂದಾಗಿ ತನ್ನ ಬಳಿ ಇದ್ದುದನ್ನೆಲ್ಲಾ ಕಳೆದುಕೊಂಡು ಇದೀಗ ಸರಿ ದಾರಿ ಕಾಣದೇ ಪರಿತಪಿಸಿ ನಡೆಯುತ್ತಿರುವ ದಯನೀಯವಾದ ಕಥೆ ಇದು. ಈತನ ಹೆಸರು ಶಿವಶಂಕರ್. ಊರು ಕಣಿವೆ. ಓದಿದ್ದು ಡಿಪೆÇ್ಲೀಮಾ ಇಂಜಿನಿಯರಿಂಗ್. ಈತನ ಬಳಿ ಇದ್ದ ಮೊಬೈಲ್‍ಗೆ ಅದೊಂದು ದಿನ ನಕಲಿ ಸಂದೇಶವೊಂದು ಬರುತ್ತದೆ. ನನ್ನ ಬಳಿ ಕೋಟ್ಯಾಂತರ ರೂ. ಹಣ ಇದೆ. ಅದನ್ನು ಭಾರತೀಯ ರೂಪಾಯಿಗೆ ಬದಲಾಯಿಸಿಕೊಳ್ಳುವವರಿದ್ದರೆ ನನ್ನನ್ನು ಕೂಡಲೇ ಸಂಪರ್ಕಿಸಿ. ನನಗೆ ಅನಾರೋಗ್ಯ ಸಮಸ್ಯೆ ಇದ್ದು, ಸಾವು ಯಾವಾಗ ಬೇಕಾದರೂ ಬರಬಹುದು. ನನಗೆ ನನ್ನವರು ಎನ್ನುವವರು ಯಾರೂ ಇಲ್ಲ. ನನ್ನ ಬಳಿ ಇರುವ ಹಣ ನಿಮ್ಮ ಅಗತ್ಯತೆಗಳನ್ನು ಪೂರೈಸಿದರೆ ಅಷ್ಟೇ ಸಾಕು ನನ್ನ ಆತ್ಮಕ್ಕೆ ತೃಪ್ತಿಯಾಗುತ್ತದೆ ಎಂದೆಲ್ಲಾ ಸಾರಾಂಶವಿರುವ ಸಂದೇಶ ಅದಾಗಿರುತ್ತದೆ. ಮೊದಲೇ ಡಿಪೆÇ್ಲೀಮಾ ಕೋರ್ಸ್ ಮುಗಿಸಿ ಕೊಂಡಿದ್ದ ಈ ಶಿವಶಂಕರ್ ಉದ್ಯೋಗವನ್ನು ಅರಸುತ್ತಿದ್ದ ಸಮಯವದು.

ಆದರೆ ಆತನ ಮೊಬೈಲ್‍ಗೆ ಬಂದಿದ್ದ ಆ ಸಂದೇಶ ಈತನ ನಿದ್ರೆಯನ್ನು ಕಸಿದು ಆ ಹಣವನ್ನೂ ಹೇಗಾದರೂ ಪಡೆದೇ ತೀರಬೇಕು. ಬೇರೆ ಯಾರಿಗಾದರೂ ಈ ಸಂದೇಶ ಸೋರಿಕೆಯಾದರೆ ಕಷ್ಟ ನನಗೊಬ್ಬನಿಗೆ, ಅದರಲ್ಲೂ ನನ್ನ ಮೊಬೈಲ್‍ಗೇನೆ ಬರಬೇಕಾದರೆ, ವಿದೇಶದಲ್ಲಿರುವ ಆ ಕೋಟ್ಯಾಧೀಶನಿಗೆ ನನ್ನ ನಂಬರ್ ಹೇಗೆ ತಿಳಿಯಲು ಸಾಧ್ಯ? ಇಲ್ಲ. ಇದು ನಮ್ಮೂರಿನ ರಾಮಲಿಂಗೇಶ್ವರ ದೇವರ ಕೃಪೆ. ಈ ಊರಿನ ಸುತ್ತ ಮುತ್ತ ಯಾರಿಗೂ ಇಲ್ಲದ ಶ್ರೀಮಂತಿಕೆ ನನ್ನದಾಗುತ್ತೆ ಎಂದುಕೊಂಡು ರಾತ್ರಿಯೆಲ್ಲಾ ನಿದ್ದೆಗೆಟ್ಟ ಈತ ಅದೊಂದು ನಕಲೀ ಸಂದೇಶ ಎಂಬ ಸತ್ಯವನ್ನು ಅರಿಯಲೇ ಇಲ್ಲ. ಬೆಳಿಗ್ಗೆ ಎದ್ದ ಕೂಡಲೇ ಊರಿನ ಕಾವೇರಿ ನದಿ ದಂಡೆಯ ಆ ದೇವಾಲಯಕ್ಕೆ ಹೋದವನೇ ಆ ಕೋಟಿ ಕೋಟಿ ಹಣ ನನ್ನದಾದರೆ ನಿನಗೂ ಒಂದಷ್ಟು ಕೊಡ್ತೀನಿ ಎಂದು ಕೈ ಮುಗಿದು ಹೊರಟಿದ್ದು ಕುಶಾಲನಗರದ ಸೈಬರ್ ಕೇಂದ್ರವೊಂದಕ್ಕೆ. ಸೈಬರ್‍ನಲ್ಲಿ ಕುಳಿತ ಈ ಮುಗ್ಧ ಶಿವಶಂಕರ್ ಆ ನಕಲಿ ಸಂದೇಶಗಾರನನ್ನು ಅಂತರ್ಜಾಲದಲ್ಲಿ ಸಂಪರ್ಕಿಸಿದ. ಕ್ರಮೇಣ ಈ ಬೆಳವಣಿಗೆ ಮೂರ್ನಾಲ್ಕು ದಿನ ನಡೆಯಿತು. ಆ ಮೋಸಗಾರ ನನ್ನ ಬಳಿ ಇರುವ ಕೋಟಿ ಹಣ ನಿನ್ನ ಬ್ಯಾಂಕ್ ಖಾತೆಗೆ ತುಂಬಲು ಇಲ್ಲಿ ಇಂತಿಷ್ಟು ಪರ್ಸೆಂಟೇಜ್ ಅಂತಾ ಪಾವತಿಸ ಬೇಕಿದೆ.

ಆ ಭಾರತೀಯ ರೂಪಾಯಿ ಯನ್ನು ನೀನು ನಿನಗೆಷ್ಟು ಕೋಟಿ ಬೇಕೋ ಅಷ್ಟಕ್ಕೆ ತುಂಬಿಸು ಎಂದು ಸಂದೇಶ ಕಳುಹಿಸಿದ. ಸಂದೇಶ ಬಂದಂತೆ ತನ್ನ ಮನೆಯಲ್ಲಿದ್ದ ಲಕ್ಷಾಂತರ ರೂ. ಹಣವನ್ನು ತನ್ನ ಪೋಷಕರಿಗೂ ತಿಳಿಸದೆಯೇ ತಂದು ಆ ಅಂತರ್ಜಾಲದಲ್ಲಿ ಕಾದು ಕೂತಿದ್ದ ನಕಲಿ ಮೋಸಗಾರನ ಖಾತೆಗೆ ಶಿವಶಂಕರ್ ಪಾವತಿಸಿದ. ಹೀಗೆ ಎರಡು ಲಕ್ಷ, ಮೂರು ಲಕ್ಷ, ಐದು ಲಕ್ಷ ರೂ.ಗಳು ಹೋದವು. ಆದರೂ ಈತನ ಕುಶಾಲನಗರದ ಬ್ಯಾಂಕಿನ ಖಾತೆಗೆ ಹಣವೇ ಬರುತ್ತಿಲ್ಲ. ಕೊನೆಗೆ ಮತ್ತೆ ಸೈಬರ್‍ಗೆ ಬಂದು ಏಕೆ ಹಣ ಬಂದಿಲ್ಲ. ಯಾವಾಗ ಬರುತ್ತೆ ಎಂದು ಕಾದು ಕುಳಿತ. ಮತ್ತೆ ಆ ಕಡೆಯಿಂದ ನಿಮಗೆ ನಮ್ಮ ಕೋಟ್ಯಾಂತರ ಹಣ ರೂಪಾಯಿಗಳಾಗಿ ಮಾರ್ಪಾಡು ಹೊಂದಿ ಬರಲು ವಿಳಂಬವಾಗುತ್ತಿದೆ. ಬೇಗ ಬೇಕು ಎಂದಾದರೆ ಮತ್ತೆ ಐದು ಲಕ್ಷ ನೀವು ಪಾವತಿಸಿ ಎಂದು ಮತ್ತೊಂದು ಸಂದೇಶ ಈ ಶಿವಶಂಕರ್‍ಗೆ ಬಂತು. ಮತ್ತೆ ಮನೆಗೆ ಬಂದವನೇ ತನ್ನ ತಾಯಿಯ ಬಳಿ ಅಂಗಲಾಚಿ ಅವರ ಹೆಸರಲ್ಲಿದ್ದ ನಿವೇಶನವೊಂದನ್ನು ಮಾರಾಟ ಮಾಡಿದ. ಆದರೂ ಹಣ ಬರಲೇ ಇಲ್ಲ.

ಕ್ರಮೇಣ ಕೊರಗಿ ಕೊರಗಿ ಖಿನ್ನತೆಯಲ್ಲಿ ಬಳಲಿದ. ಒಂದು ವರ್ಷದ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಆತ ಮಾನಸಿಕ ವಾಗಿ ಅಕ್ಷರಶಃ ಕುಸಿದಿದ್ದಾನೆ. ತಾನು ಏನು ಮಾಡುತ್ತಿದ್ದೇನೆ. ತಾನು ಏನು ಮಾಡಬೇಕಿತ್ತು. ಏನೆಲ್ಲಾ ಮಾಡಿದೆ ಎಂಬ ನೈಜತೆಯ ಅರಿವೂ ಆಗುತ್ತಿಲ್ಲ. ಬೆಳಗ್ಗೆ ಎದ್ದವನು ನಡೆದುಕೊಂಡೇ ತನಗರಿವಾದ ಕಡೆ ಸಾಗುತ್ತಾನೆ. ಈಗ ಯಾವಾಗ ಎಷ್ಟು ಸಮಯಕ್ಕೆ ನೋಡಿದರೂ ರಸ್ತೆಯಲ್ಲೇ ಸಾಗುತ್ತಿರುತ್ತಾನೆ. ಅತ್ತ ಮನೆಯೊಳಗೆ ಈತನ ಹೆತ್ತ ಒಡಲು ಮಗ ತಂದುಕೊಂಡ ದಯನೀಯ ಸ್ಥಿತಿ ಕಂಡು ಸಾಕಷ್ಟು ನೋವಿನ ಜ್ವಾಲೆಯಲ್ಲಿ ಬೇಯುತ್ತಿದೆ. ಇಂತಹ ಸ್ಥಿತಿ ಯಾವ ಮಕ್ಕಳಿಗೂ ಬಾರದಿರಲೀ ಎನ್ನುವ ಈ ಹೆತ್ತೊಡಲು, ನನ್ನ ಮಗನಿಗೆ ವಂಚಿಸಿ ಮೋಸ ಮಾಡಿ ಹಣ ದೋಚಿದ ವರನ್ನು ಹಿಡಿದು ಹಣ ವಸೂಲಿ ಮಾಡಿಕೊಡುವವರು ಯಾರೂ ಇಲ್ಲವೇ ಎಂದು ಬೇಡುತ್ತಿದೆ. ತಂತ್ರಜ್ಞಾನ ಎಷ್ಟೆಲ್ಲಾ ಬೆಳೆದರೂ ಅಂತರ್ಜಾಲ ಖದೀಮರನ್ನು ಹಿಡಿಯಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ಇಲ್ಲಿ ಯಕ್ಷ ಪ್ರಶ್ನೆ. ಈಗಾಗಲೇ ಕುಶಾಲನಗರ ಸೇರಿದಂತೆ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗಳ ನಂಬರ್ ಗಳನ್ನು ಹ್ಯಾಕ್ ಮಾಡಿ ಹಣ ದೋಚಿರುವ ನಿದರ್ಶನಗಳು ಸಾಕಷ್ಟು ಇರುವುದನ್ನು ಸ್ಮರಿಸಬಹುದು. ಆದ್ದರಿಂದ ಮೊಬೈಲ್‍ಗಳನ್ನು ಆದಷ್ಟು ಮಿತವಾಗಿ ಮತ್ತು ಹಿತವಾಗಿ, ಒಳ್ಳೆಯದಕ್ಕೆ ಮಾತ್ರ ಬಳಸಬೇಕಿದೆ. ಮೊಬೈಲ್‍ಗಳಿಗೆ ಬರುವ ಸಂದೇಶಗಳ ಬಗ್ಗೆಯೂ ಎಲ್ಲರೂ ಜಾಗರೂಕರಾಗಿ ಇರಬೇಕಿದೆ.

ವಿಶೇಷ ವರದಿ : ಕೆ.ಎಸ್.ಮೂರ್ತಿ