ವೀರಾಜಪೇಟೆ, ಆ.30: ಓಣಂ ಹಬ್ಬದ ಮುನ್ನಾ ದಿನದ ‘ಉತ್ರಾಡಂ’ನ್ನು ವೀರಾಜಪೇಟೆ ಭಾಗದಲ್ಲಿ ಆಚರಿಸಲಾಯಿತು. ಈ ಹಿಂದಿನ ವರ್ಷಗಳಲ್ಲಿ ಓಣಂ ಹಬ್ಬದ ವಿಶೇಷವಾದ ‘ಪೂಕಳಂ’ (ಹೂವಿನ ರಂಗೋಲಿ)ಗಾಗಿ ಉಪಯೋಗಿಸುವ ವಿವಿಧ ಬಗೆಯ ಹೂವುಗಳ ಮಾರಾಟ ಭರ್ಜರಿಯಾಗಿರುತ್ತಿತ್ತು. ಆದರೆ ಈ ಬಾರಿ ಕೊರೊನಾ ಭೀತಿಯಿಂದಾಗಿ ಜನ ಸಂಚಾರ ಕಡಿಮೆ ಇದ್ದುದರಿಂದ ಹೂ ಮಾರಾಟಕ್ಕೆ ಹಿನ್ನಡೆ ಯುಂಟಾಗಿದೆ. ಅದೂ ಅಲ್ಲದೆ ಪ್ರತಿವರ್ಷ ಕೊಡಗು ಗಡಿ ಕಣ್ಣನೂರು ಜಿಲ್ಲೆಯವರು ಮೈಸೂರಿನಿಂದ ಕೊಡಗು ಮೂಲಕ ಸರಬರಾಜಾಗುತ್ತಿದ್ದ ಹೂವನ್ನೇ ಹಬ್ಬಾಚರಣೆಗೆ ಬಳಸುತ್ತಿದ್ದರು. ಆದರೆ ಈ ವರ್ಷ ಕರ್ನಾಟಕದ ಹೂವುಗಳ ಮಾರಾಟಕ್ಕೆ ಕೇರಳ ಸರಕಾರÀ ನಿರ್ಬಂಧ ಹೇರಿದ್ದು, ‘ಉತ್ರಾಡಂ’ ದಿನದಂದು ಕೇರಳಕ್ಕೆ ಹೂವುಗಳನ್ನು ಸಾಗಿಸುತ್ತಿದ್ದ 20ಕ್ಕೂ ಹೆಚ್ಚು ವಾಹನಗಳನ್ನು ಕೇರಳ ಗಡಿಯ ಕೂಟುಪೊಳೆಯಿಂದಲೇ ಹಿಂದಕ್ಕೆ ಕಳುಹಿಸಲಾಗಿದೆ.

ಕೇರಳದ ಮಾರುಕಟ್ಟೆಗೆ ಓಣಂ ಉತ್ಸವ ಸಂದರ್ಭದಲ್ಲಿ ಕರ್ನಾಟಕದ ಹೂವಿನ ವ್ಯಾಪಾರಿಗಳು ಮುಕ್ತವಾಗಿ ತೆರಳಿ ಬೇಡಿಕೆಗೆ ತಕ್ಕಂತೆ ನಿಗಧಿತ ದರದಲ್ಲಿ ಹೂವುಗಳನ್ನು ಮಾರಾಟ ಮಾಡುತ್ತಿದ್ದರು. ಕೇರಳದಲ್ಲಿ ಕರ್ನಾಟಕದ ಹೂಗಳ ಮಾರಾಟ ವನ್ನು ನಿಷೇಧಿಸಿರುವುದರಿಂದ ಈ ಹೂವುಗಳನ್ನು ವೀರಾಜಪೇಟೆಯಲ್ಲೇ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆಯೆಂದು ಹೂವು ಮಾರಾಟಗಾರರೊಬ್ಬರು ಹೇಳಿದರು.

ಗೋಣಿಕೊಪ್ಪಲು

ಓಣಂ ಹಬ್ಬದ ಪ್ರಯುಕ್ತ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ವಿವಿಧ ರೀತಿಯ ಹೂಗಳು ಹೆಚ್ಚಾಗಿ ಬಂದಿದ್ದವು,ಪಿರಿಯಾಪಟ್ಟಣ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೂಗಳನ್ನು ತರುವ ಮೂಲಕ ವ್ಯಾಪಾರ ನಡೆಸಿದರು.

-ಡಿ.ಎಂ.ಆರ್./ ಜಗದೀಶ್