ಸೋಮವಾರಪೇಟೆ, ಆ. 30: ಪ್ರಪಂಚ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಜೀವನದ ಸಾಕ್ಷಾತ್ಕಾರಕ್ಕೆ ಅಧ್ಯಾತ್ಮಿಕತೆ ಮುಖ್ಯ ಎಂದು ಮನೆಹಳ್ಳಿ ಮಠಾಧೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಜಂಗಮ ಅರ್ಚಕರ ಸಂಘ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ನೇಗಳ್ಳೆ ವೀರಭದ್ರೇಶ್ವರ ದೇವಾಲಯ ಸಮಿತಿ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ದೇವಾಲಯದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ದುಷ್ಟಶಕ್ತಿಗಳ ನಾಶ ಮಾಡಿ ಶಾಂತಿ ನೆಲೆಸಲು ಅವತರಿಸಿದವನೆ ವೀರಭದ್ರೇಶ್ವರ. ವೀರ ಎಂದರೆ ಶಾಂತಿ-ಭದ್ರ ಎಂದರೆ ನೆಲೆ ಎಂದು ವಿಶ್ಲೇಷಿಸಿದ ಸ್ವಾಮೀಜಿ, ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆ ದರೂ ಸಹ ಅಧ್ಯಾತ್ಮಿಕತೆ ಇರಬೇಕು ಎಂದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ದೇವಾಲಯ ಸಮಿತಿ ಅಧ್ಯಕ್ಷ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಖಜಾಂಚಿ ಡಿ.ಬಿ. ಸೋಮಪ್ಪ, ಕಾರ್ಯದರ್ಶಿ ಜಯರಾಜ್, ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಮೋಹನ್ ಮೂರ್ತಿ, ಕಾರ್ಯದರ್ಶಿ ಸೋಮಶೇಖರ್ ಶಾಸ್ತ್ರಿ, ಖಜಾಂಚಿ ಮನುಕುಮಾರ್ ಶಾಸ್ತ್ರಿ, ಅರ್ಚಕ ಸೋಮೇಶ್, ದೇವಾಲಯ ಸಮಿತಿ ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಚಂದನ್ ಹಾಗೂ ಗ್ರಾಮಸ್ಥರು ಹಾಜರಿದ್ದರು. ವೀರಭದ್ರೇಶ್ವರ ಜಯಂತ್ಯೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ ನೆರವೇರಿತು.