ಮಡಿಕೇರಿ, ಆ. 29: ಜಿಲ್ಲೆಯ ರೈತರಿಗೆ ಪ್ರಸ್ತುತ ಅತ್ಯಗತ್ಯವಾಗಿರುವ ಯೂರಿಯಾ ರಸಗೊಬ್ಬರ ಸಮರ್ಪಕವಾಗಿ ಲಭ್ಯವಾಗದೆ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಬಹುತೇಕ ರಸಗೊಬ್ಬರದ ವಹಿವಾಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನಡೆಯುತ್ತಿದ್ದು, ರೈತರು ಸಾಧಾರಣವಾಗಿ ಇಲ್ಲಿಂದಲೇ ರಸಗೊಬ್ಬರವನ್ನು ಪಡೆದುಕೊಳ್ಳುತ್ತಾರೆ. ಆದರೆ ಪ್ರಸ್ತುತ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಯೂರಿಯಾ ಸಿಗುತ್ತಿಲ್ಲ ಎಂದು ಕೆಲವಾರು ರೈತರು - ಸಹಕಾರ ಸಂಘಗಳ ಅಧ್ಯಕ್ಷರು ಪತ್ರಿಕೆಯೊಂದಿಗೆ ದೂರಿದ್ದಾರೆ. ಸಾಧಾರಣವಾಗಿ ಜಿಲ್ಲೆಯ ಬೇಡಿಕೆಯಂತೆ ಆಗಸ್ಟ್ ಅಂತ್ಯದ ವೇಳೆಗೆ 2750 ಮೆಟ್ರಿಕ್ ಟನ್‍ನಷ್ಟು ಯೂರಿಯಾ ಸಿಗಬೇಕಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಮಳೆ - ಭೂಕುಸಿತದಂತಹ ಕಾರಣದಿಂದಾಗಿ ಜಿಲ್ಲೆಗೆ ಅಗತ್ಯವಿರುವಷ್ಟು ಗೊಬ್ಬರ ಬಂದಿಲ್ಲವೆನ್ನಲಾಗಿದೆ.

ಪ್ರಸ್ತುತದ ಸನ್ನಿವೇಶದಲ್ಲಿ ಇತರ ಮಾದರಿಯ ದುಬಾರಿ ದರದ ಗೊಬ್ಬರಗಳನ್ನು ಬಳಸಲು ರೈತರಿಗೆ ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಗೊಬ್ಬರಗಳು ಸಿಗುತ್ತಿವೆಯಾದರೂ ಅಗತ್ಯವಿರುವ ಯೂರಿಯಾ ಮಾತ್ರ ಸಿಗುತ್ತಿಲ್ಲ. ಆದರೆ ಖಾಸಗಿಯಾಗಿ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳ ಬಳಿ ಯೂರಿಯಾ ಸಿಗುತ್ತಿದೆ. ಆದರೆ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮಾತ್ರ ಯಾಕೆ ಪೂರೈಕೆಯಾಗುತ್ತಿಲ್ಲ ಎಂಬದು ಪ್ರಶ್ನಾರ್ಹವಾಗಿದೆ ಎಂದು ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ಚಂಗಪ್ಪ ಆಕ್ಷೇಪಿಸಿದ್ದಾರೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಯೂರಿಯಾ ಅಲಭ್ಯತೆಯ ಕುರಿತು ರೈತರಿಂದ ತಮಗೂ ಮಾಹಿತಿ ಬಂದಿದೆ. ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ತ್ವರಿತವಾಗಿ ಇದಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ದಾಸ್ತಾನು ಬರುತ್ತಿದೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬನಾ ಶೇಕ್ ಅವರು, ಕೊರೊನಾ, ಪ್ರವಾಹ, ಭೂಕುಸಿತದಂತಹ ಸಮಸ್ಯೆಗಳಿಂದ ಅಗತ್ಯ ಗೊಬ್ಬರ ಲಭ್ಯವಾಗಿರಲಿಲ್ಲ. ಇದೀಗ ಈ ಬಗ್ಗೆ ವ್ಯವಹರಿಸಲಾಗಿದ್ದು, ಜಿಲ್ಲೆಗೆ ರಸಗೊಬ್ಬರ ದಾಸ್ತಾನು ಬರುತ್ತಿದ್ದು ಇದನ್ನು ತಾಲೂಕುವಾರು, ಕೃಷಿ ಪತ್ತಿನ ಸಂಘಗಳಿಗೆ ಒದಗಿಸಲಾಗುವುದು. ಈ ಕುರಿತು ಗಮನಹರಿಸಿ ಇಲಾಖಾ ಕಚೇರಿಗೆ ವಿವರ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.