ಸೋಮವಾರಪೇಟೆ, ಆ. 29: ತಾಲೂಕಿನ ಮಾದಾಪುರ ಹೋಬಳಿ ಕೇಂದ್ರ ವ್ಯಾಪ್ತಿಯಲ್ಲಿ ನೂತನವಾಗಿ ಪದವಿ ಕಾಲೇಜು ಸ್ಥಾಪನೆಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಮಾದಾಪುರದ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಸರ್ಕಾರಿ ಜಾಗವನ್ನು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಅಪ್ಪಾಜಿಗೌಡ, ಸಹಾಯಕ ನಿರ್ದೇಶಕ ನಾಗೇಂದ್ರ ಪ್ರಸಾದ್ ಮತ್ತು ತಂಡದೊಂದಿಗೆ ಪ್ರ್ರಾಂಶುಪಾಲೆ ಪ್ರೊ. ಚಿತ್ರ, ಪ್ರೊ. ಡಾ. ಕೆ.ಸಿ. ದಯಾನಂದ್ ಸೇರಿದಂತೆ ಇಲಾಖೆಯ ಅಧಿಕಾರಿ ಗಳು ಪರಿಶೀಲನೆ ನಡೆಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಟ್ಟಂತೆ ಕಾಲೇಜು ಶಿಕ್ಷಣ ಇಲಾಖೆಯ ಮುಖಾಂತರ ಮಾದಾಪುರದಲ್ಲಿ ಪದವಿ ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಈ ಹಿಂದೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಇಲಾಖೆಯಿಂದ ಪೂರಕವಾಗಿ ಸ್ಪಂದನಾ ಲಭಿಸಿದ್ದು, ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.

ಅಧಿಕಾರಿಗಳ ತಂಡವು ಸರ್ಕಾರಿ ಪ್ರೌಢಶಾಲೆ ಆವರಣ, ಪದವಿ ಪೂರ್ವ ಕಾಲೇಜು ಆವರಣದಲ್ಲಿ ರುವ ಸರ್ಕಾರಿ ಜಾಗವನ್ನು ಪರಿಶೀಲನೆ ನಡೆಸಿದ್ದು, ವರದಿಯನ್ನು ಇಲಾಖೆಯ ಮೇಲಧಿಕಾರಿಗಳಿಗೆ ಸಲ್ಲಿಸಲಿದೆ. ಅದರ ಆಧಾರದ ಮೇಲೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮಾದಾಪುರದಲ್ಲಿ ಪದವಿ ಕಾಲೇಜು ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವದು ಎಂದು ಶಾಸಕ ರಂಜನ್ ತಿಳಿಸಿದರು.