ಕಣಿವೆ, ಆ. 29: ಉದ್ದೇಶಿತ ಶ್ರೀರಂಗಪಟ್ಟಣ ಕುಶಾಲನಗರ ಮಡಿಕೇರಿ ಸಂಪರ್ಕಿತ ರಾಷ್ಟ್ರೀಯ ಹೆದ್ದಾರಿಯ 275 ರ ಹೊಸ ಮಾರ್ಗದ ಆಗಮನ ಗುಡ್ಡೆಹೊಸೂರು ಭಾಗದಲ್ಲಿನ ಅನೇಕ ಜನರ ನೆಮ್ಮದಿಗೆ ಭಂಗ ತಂದಿದೆ.
ಕಳೆದ ಹಲವು ವರ್ಷಗಳಿಂದ ಆಶ್ರಯ ಕೊಟ್ಟಿದ್ದ ಮನೆಗಳು, ಅಪಾರ ಪ್ರಮಾಣದ ಆಸ್ತಿ - ಪಾಸ್ತಿಯ ಮೇಲೆ ನೂತನ ಹೆದ್ದಾರಿಯನ್ನು ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ರಹದಾರಿ ನೀಡಿರುವ ಕಾರಣ, ಕಳೆದ ಹತ್ತು ದಿನಗಳ ಹಿಂದೆ ಸಂಬಂಧಿತ ರಸ್ತೆ ನಿರ್ಮಿತ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರ್ವೆ ಕಾರ್ಯ ನಡೆಸಿ ಹಾಕಿದ ಅಳತೆಯ ಕಲ್ಲುಗಳು ಇಲ್ಲಿನ ನಿವಾಸಿಗಳ ನಿದ್ದೆ ಕೆಡಿಸಿದೆ.
ಮೊದಲೇ ಕಳೆದ ಮೂರು ವರ್ಷಗಳಿಂದ ಈ ಜನರನ್ನು ಸಂಕಷ್ಟಕ್ಕೆ ದೂಡಿದ ಜಲಪ್ರವಾಹ, ಕಳೆದ ಐದಾರು ತಿಂಗಳಿಂದ ಕಾಡುತ್ತಿರುವ ಕೊರೊನಾ ಭೀತಿ ತಂದ ಆಪತ್ತಿನೊಡನೆ ರಾಷ್ಟ್ರೀಯ ಹೆದ್ದಾರಿಯ ಹೊಸ ಮಾರ್ಗ ಚೇತರಿಸಿಕೊಳ್ಳಲಾರದ ಹೊಡೆತವನ್ನೇ ನೀಡುತ್ತಿದೆ. ಗುಡ್ಡೆಹೊಸೂರಿನ ಬಸವನಹಳ್ಳಿಯ ಹೆದ್ದಾರಿಯಂಚಿನಲ್ಲಿ ಇರುವ ಗುಡ್ಡೆಮನೆ ಅಶ್ವಥ್, ಅನಂತ, ಪಾಲಾಕ್ಷ, ಅಶೋಕ್, ಕೃಷ್ಣಪ್ಪ, ಪುಷ್ಪ, ಪೆÇನ್ನಮ್ಮ, ಗಣೇಶ್, ಶಿವಾಜಿ, ಮಹೇಂದ್ರ ಮೊದಲಾದವರು ನೆಲೆಸಿರುವ ವಾಸಿಸಿರುವ ಮನೆಗಳು ಹಾಗೂ ಅಮೂಲ್ಯ ಆಸ್ತಿಗಳನ್ನು ಹೆದ್ದಾರಿ ನುಂಗಿ ಹಾಕುತ್ತಿದೆ. ಅದರೊಳಗೂ ಗುಡ್ಡೆಮನೆ ಕುಟುಂಬಕ್ಕೆ ಸೇರಿದ ಮೂವರು ಸಹೋದರರ ಮನೆ ಹಾಗೂ ಆಸ್ತಿಗಳನ್ನು ಸಂಪೂರ್ಣವಾಗಿ ಹೆದ್ದಾರಿ ನುಂಗಿ ಹಾಕಲಿದೆ.
ಆರೋಗ್ಯ ಇಲಾಖೆಯಲ್ಲಿ ಸೇವೆಯಲ್ಲಿದ್ದು ನಿವೃತ್ತಿಯ ನಂತರ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಕಳೆದ ಕೆಲವೇ ವರ್ಷಗಳ ಹಿಂದಷ್ಟೇ ಹೊಸ ಮನೆಯನ್ನು ಕಟ್ಟಿ ಕೊಂಡಿದ್ದ ಪಾಲಾಕ್ಷ ಕುಟುಂಬದವರ ರೋಧನ ಹೇಳತೀರದಾಗಿದೆ.
ಇನ್ನು ಇವರ ಹಿರಿಯ ಸಹೋದರ ಅಶ್ವಥ್ ಎಂಬವರು ಕಳೆದ ಒಂದು ವರ್ಷದ ಹಿಂದೆ ಪಾರ್ಶುವಾಯುಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಯಾವ ಕಾರಣಕ್ಕೂ ನಮಗೆ ಬದುಕು ಕೊಟ್ಟ ಮನೆಯನ್ನು ಬಿಡಲಾರೆವು ಎಂದಿದ್ದಾರೆ. ಹಾಗೊಂದು ವೇಳೆ ಮಾಡೋದೆ ಆದರೆ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕೊಂಡೊಯ್ದು ಈಗಿರುವ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿ ಎನ್ನುತ್ತಾರೆ ಗುಡ್ಡೆಹೊಸೂರಿನ ಗುಡ್ಡೆಮನೆ ಮಣಿಕುಮಾರ್.
ಈ ಬಗ್ಗೆ ಕೂಡಲೇ ಕೇಂದ್ರ ಸಚಿವ ಸದಾನಂದ ಗೌಡರ ಗಮನಕ್ಕೆ ತರಲಾಗುವುದು. ಬದಲೀ ಮಾರ್ಗದಲ್ಲಿ ಹೆದ್ದಾರಿಗೆ ಮುಂದಾಗಲಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. 6 ಸಾವಿರ ಕೋಟಿ ವೆಚ್ಚದ 115 ಕಿಮೀ ಉದ್ದದ ಈ ಹೆದ್ದಾರಿ ಯೋಜನೆ ಕೇಂದ್ರ ಸರ್ಕಾರದ ಅನುಮೋದಿತ ಹಾಗೂ ಅನುದಾನಿತ ಯೋಜನೆಯಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿಯ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಯಿಂದ ಬೇರ್ಪಟ್ಟ ಈ ಹೆದ್ದಾರಿ ಹುಣಸೂರು, ಪಿರಿಯಾಪಟ್ಟಣ, ಬೈಲುಕೊಪ್ಪ, ಬಸವನಹಳ್ಳಿಯಲ್ಲಿ ಸಾಗಿ ಆನೆಕಾಡು ಅರಣ್ಯದ ಬಳಿಯ ಗುಡ್ಡೆಮನೆ ಕುಟುಂಬಸ್ಥರ ಜಾಗದಲ್ಲಿ ಮಡಿಕೇರಿ ಕುಶಾಲನಗರ ಹೆದ್ದಾರಿಯನ್ನು ಸಂಪರ್ಕಿಸಲಿದೆ.
ಈಗಾಗಲೇ ರಾಷ್ಟ್ರೀಯ ರಸ್ತೆ ಪ್ರಾಧಿಕಾರ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬಸವನಹಳ್ಳಿಯವರೆಗೆ ಮೊದಲ ಹಂತದ ಸರ್ವೆ ಕಾರ್ಯ ಪೂರ್ಣಗೊಳಿಸಿ ಗಡಿಗಳನ್ನು ಗುರುತಿಸಿ ಗಡಿಕಲ್ಲುಗಳನ್ನು ಹಾಕಿದ್ದಾರೆ. ತೆಪ್ಪದ ಕಂಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಹೊಸ ಸೇತುವೆಯನ್ನು ನಿರ್ಮಿಸುವ ಪ್ರಸ್ತಾವನೆಯೂ ಇದೆ. ಎನ್ಎಚ್ಎಐ ವೆಬ್ಸೈಟ್ನಲ್ಲಿ ನಿರ್ದಿಷ್ಟಪಡಿಸಿದ ಪ್ರಕಾರ ಈ ಹೆದ್ದಾರಿ ನಾಲ್ಕರಿಂದ ಆರು ಲೇನ್ಗಳನ್ನು ಹೊಂದಿರುತ್ತದೆ. ತೆಪ್ಪದಕಂಡಿ ಬಳಿ ಕೊಣನೂರು-ತಲಚೇರಿ ರಾಜ್ಯ ಹೆದ್ದಾರಿ ಸೇರುವ ಮಾರ್ಗದಲ್ಲಿ ದೈತ್ಯ ವೃತ್ತ ನಿರ್ಮಾಣವಾಗಲಿದೆ.
ಗಡಿಗಳನ್ನು ಗುರುತಿಸಿದ ಬಳಿಕ ಭೂ ಮಾಲೀಕರಿಗೆ ನೋಟೀಸ್ ನೀಡಲಾಗುತ್ತದೆ ಎಂದಿರುವ ಅಧಿಕಾರಿಗಳು ಭೂಮಾಲೀಕರು ಈ ಹೈವೇ ಸಂಬಂಧ ಆಕ್ಷೇಪಣೆಗಳನ್ನು ಕೂಡ ದಾಖಲಿಸಲು ಅವಕಾಶ ವಿರುತ್ತದೆ ಎಂದಿದ್ದಾರೆ. ಈಗಾಗಲೇ ಭೂಮಿ ಮತ್ತು ಮನೆಗಳನ್ನು ಕಳೆದುಕೊಳ್ಳುವ ಭೂಮಾಲೀಕರನ್ನು ಗುರುತಿಸುವ ಕೆಲಸವಾಗುತ್ತಿದೆ. ಬಳಿಕ ಪರಿಹಾರ ನಿಗದಿಪಡಿಸಲಾಗುತ್ತದೆ ಎಂದು ವಿಶೇಷ ಭೂ ಸ್ವಾಧೀನ ಅಧಿಕಾರಿ ದೇವರಾಜು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸ್ಥಳೀಯವಾಗಿ ಭೂಮಾಲೀಕರ ಬಗ್ಗೆ ಮಾಹಿತಿ ಇರುವ ಸಂಬಂಧಿತ ಕಂದಾಯ ಅಧಿಕಾರಿಗಳ ಮೂಲಕ ಭೂ ಮಾಲೀಕರ ಆಸ್ತಿ ಪಾಸ್ತಿಗಳ ಸಂಪೂರ್ಣ ಸಮೀಕ್ಷೆ ನಡೆಸುತ್ತೇವೆ.
ಸೇತುವೆಗಳು, ಬೈಪಾಸ್ ರಸ್ತೆಗಳು ಸೇರಿದಂತೆ ಸಂಪೂರ್ಣ ಸಮೀಕ್ಷೆಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಕೊಡುವ ಗುರಿ ಹೊಂದಿದ್ದೇವೆ. ಆಸ್ತಿ ಕಳೆದುಕೊಂಡ ಫಲಾನುಭವಿಗಳಿಗೆ ಪರಿಹಾರ ವಿತರಿಸಿದ ನಂತರ ರಸ್ತೆ ನಿರ್ಮಾಣ ಕಾರ್ಯಗಳನ್ನು ಪೂರ್ಣ ಗೊಳಿಸಲು ಮುಂದಿನ ಎರಡು ವರ್ಷಗಳನ್ನು ತೆಗೆದುಕೊಳ್ಳಲಿದ್ದೇವೆ. ಹೆದ್ದಾರಿ 93 ಕಿಮೀ ಹಾಗೂ ಬೈಪಾಸ್ಗಳು 84 ಕಿಮೀ ಉದ್ದವನ್ನು ಕುಶಾಲನಗರ ಹಾಗೂ ಪಿರಿಯಾ ಪಟ್ಟಣಗಳಲ್ಲಿ ಹೊಂದಿದ್ದು, ಹುಣಸೂರು, ಬಿಳಿಕೆರೆ ಮತ್ತು ಮೈಸೂರುಗಳಿಗೆ ಸಂಯೋಜಿತ ಬೈಪಾಸ್ ಅನ್ನು ಪ್ರಸ್ತಾಪಿಸಲಾಗಿದೆ ಎಂದು ದೇವರಾಜು ತಿಳಿಸಿದ್ದಾರೆ.
- ಕೆ.ಎಸ್. ಮೂರ್ತಿ, ಕುಡೆಕಲ್ ಗಣೇಶ್