ಕುಶಾಲನಗರ, ಆ. 29: ಹುಣಸೂರು ಬಳಿ ನಡೆದ ವಾಹನ ಅಪಘಾತದಲ್ಲಿ ಕುಶಾಲನಗರದ ಮಹಿಳೆ ಸೇರಿದಂತೆ ಒಂದೇ ಕುಟುಂಬದ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ನಡೆದಿದೆ. ಕುಶಾಲನಗರ ಮುಳ್ಳುಸೋಗೆ ನಿವಾಸಿ ವಸಂತ (52) ಮತ್ತು ಅವರ ತಂದೆ ರಾಜಗೋಪಾಲ್ (75) ಮೃತಪಟ್ಟ ದುರ್ದೈವಿಗಳು.

ವಸಂತ ಅವರ ತಾಯಿ ಜಯಮ್ಮ, ಕಾರು ಚಾಲಕ ವೀರಭದ್ರ ತೀವ್ರ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ವಸಂತ ಮೂಲತಃ ಹುಣಸೂರಿನ ಧರ್ಮಪುರಿಯವರಾಗಿದ್ದು ಮುಳ್ಳುಸೋಗೆ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು.

ಸಮಾರಂಭವೊಂದಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಹುಣಸೂರು ಬಳಿ ಸಣ್ಣೇಗೌಡನ ಹಳ್ಳಿ ಬಳಿ ರತ್ನಪುರಿ ರಸ್ತೆಯಲ್ಲಿ ಅರಳಿಕಟ್ಟೆ ಯೊಂದಕ್ಕೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಾರಿನ ಚಕ್ರ ಪಂಕ್ಚರ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಅರಳಿಕಟ್ಟೆಗೆ ಡಿಕ್ಕಿಯಾಗಿದೆ. ಇದರಿಂದ ತೀವ್ರ ಗಾಯಗೊಂಡ ವಸಂತ ಸೇರಿದಂತೆ 4 ಜನರನ್ನು ಮೈಸೂರು ನಾರಾಯಣ ಹೃದಯಾಲಯಕ್ಕೆ ಚಿಕಿತ್ಸೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಬಿಳಿಕೆರೆ ಪೊಲೀಸ್ ಮೂಲಗಳು ತಿಳಿಸಿವೆ.