ಕುಶಾಲನಗರ, ಆ. 29: ನಗರ ಮತ್ತು ನದಿ ಸ್ವಚ್ಛತೆ ಉದ್ದೇಶ ದೊಂದಿಗೆ ವಾಣಿಜ್ಯ ನಗರಿ ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಕಲ್ಪಿಸುವ ಯೋಜನೆ ಕಾಮಗಾರಿ ಪ್ರಾರಂಭಗೊಂಡು 6 ವರ್ಷಗಳು ಕಳೆದರೂ ಪೂರ್ಣಗೊಳ್ಳದೆ ಪಟ್ಟಣದ ಬಹುತೇಕ ಯೋಜನೆಗಳಂತೆ ನೆನೆಗುದಿಗೆ ಬಿದ್ದಿದೆ. ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಏರುಪೇರಾಗುವು ದರೊಂದಿಗೆ ಜೀವನದಿ ಕಾವೇರಿ ಕಲುಷಿತವಾಗುವುದನ್ನು ತಡೆಗಟ್ಟುವ ಪ್ರಮುಖ ಪಾತ್ರ ವಹಿಸಬೇಕಾಗಿದ್ದ ಸರಕಾರದ ಬೃಹತ್ ಯೋಜನೆ ಯೊಂದು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕೆಲವರ ಅಸಹಕಾರ ದೊಂದಿಗೆ ಇನ್ನೂ ಪೂರ್ಣ ಗೊಂಡಿಲ್ಲ. ಆದರೆ ಯೋಜನೆಯ ಹೆಸರಿನಲ್ಲಿ ರೂ. 35 ಕೋಟಿ ಹಣ ಸಂದಾಯವಾಗಿರುವುದು ದಾಖಲೆಗಳಲ್ಲಿ ಕಾಣಬಹುದು. ಇದುವರೆಗೆ ಮಾಡಿದ ಕಾಮಗಾರಿ ಬಹುತೇಕ ಕಾವೇರಿ ನದಿ ಪಾಲಾಗಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ದಿವ್ಯ ಮೌನಕ್ಕೆ ಶರಣಾಗಿರುವುದು ಈ ಅವಾಂತರಕ್ಕೆ ಕಾರಣ.

ಕುಶಾಲನಗರ ಮತ್ತು ಗುಮ್ಮನಕೊಲ್ಲಿ, ಮುಳ್ಳುಸೋಗೆ ಗ್ರಾಮಗಳನ್ನು ಈ ಯೋಜನೆಯ ಅಂದಾಜು ಪಟ್ಟಿಯಲ್ಲಿ ಸೇರಿಸ ಲಾಗಿದ್ದು ಸುಮಾರು ರೂ. 45 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ನಿಧಾನಗತಿಯಲ್ಲಿ ಸಾಗಿದ ಕಾಮಗಾರಿಯ ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡಿದ್ದು 30 ತಿಂಗಳಲ್ಲಿ ಪೂರ್ಣಗೊಳಿಸಿ ಅನುಷ್ಠಾನ ಗೊಳಿಸಬೇಕಾಗಿತ್ತು. ಯೋಜನೆ ಪೂರ್ಣಗೊಳಿಸಬೇಕಾದ ಅವಧಿ ಜೂನ್-2017 ಕ್ಕೆ ಅಂತ್ಯಗೊಂಡು 3 ವರ್ಷ ಕಳೆದರೂ ಯೋಜನೆ ಸಂಪೂರ್ಣ ಭೂಗತಗೊಂಡಿದೆ ಎಂದರೆ ತಪ್ಪಾಗಲಾರದು.

ಕುಶಾಲನಗರ ಪಟ್ಟಣದ ಮುಂದಿನ 25 ವರ್ಷಗಳ ಜನಸಂಖ್ಯೆ ಆಧಾರದಲ್ಲಿ ಈ ಯೋಜನೆಗೆ ಅಂದಾಜು ಪಟ್ಟಿ ತಯಾರಿಸಲಾಗಿತ್ತು. 2027 ರಲ್ಲಿ ಪಟ್ಟಣದ ಜನಸಂಖ್ಯೆ ಅಂದಾಜು 38 ಸಾವಿರದ 600 ಹಾಗೂ 2043 ರಲ್ಲಿ ಜನಸಂಖ್ಯೆ 60 ಸಾವಿರದ 400 ಅಂದಾಜು ಪಟ್ಟಿ ತಯಾರಿಸುವುದರೊಂದಿಗೆ ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಯೋಜನೆಯ ತಾಂತ್ರಿಕ ಅನುಮೋದನೆ 2014 ರಲ್ಲಿ ದೊರೆತಿದೆ. ಯೋಜನೆಯ ಪ್ರಕಾರ ಒಟ್ಟು 71.865 ಕಿಮೀ ಉದ್ದದ ಕೊಳವೆಗಳ ಒಳಚರಂಡಿ ಮಾರ್ಗ ಹೊಂದಿರುವ ಯೋಜನೆಯಲ್ಲಿ 2449 ಆಳ ಗುಂಡಿಗಳ ನಿರ್ಮಾಣ, 10 ಮೀ ವ್ಯಾಸದ 3 ವೆಟ್‍ವೆಲ್ ನಿರ್ಮಾಣ, 300 ಮೀ ಉದ್ದದ 300 ಮಿಮಿ ವ್ಯಾಸವುಳ್ಳ ಕೊಳವೆ ಮಾರ್ಗ, ಎರಡು ಸೆಪ್ಟಿಕ್ ಟ್ಯಾಂಕ್ ನಿರ್ಮಾಣ, ಜನರೇಟರ್ ಕಟ್ಟಡ ನಿರ್ಮಾಣ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮಲಿನ ನೀರು ಶುದ್ಧೀಕರಣ ಘಟಕ, 3 ಕಿಮೀ ಉದ್ದಕ್ಕೆ ಕುಶಾಲನಗರ ಬಳಿಯಿಂದ ವೆಟ್‍ವೆಲ್‍ಗೆ 11 ಕಿವ್ಯಾ ಸಾಮಥ್ರ್ಯದ ವಿದ್ಯುತ್ ಮಾರ್ಗ ಅಳವಡಿಸುವುದು ಈ ಯೋಜನೆಯ ಪ್ರಮುಖ ಕಾಮಗಾರಿಯಾಗಿದೆ. ಅಂತಿಮವಾಗಿ 100 ಹೆಚ್‍ಪಿ ಸಾಮಥ್ರ್ಯದ 3 ಪಂಪ್‍ಸೆಟ್‍ಗಳು, 75 ಹೆಚ್‍ಪಿಯ 2, 50 ಹೆಚ್‍ಪಿಯ 2 ಹಾಗೂ 25 ಹೆಚ್‍ಪಿ ಸಾಮಥ್ರ್ಯದ 3 ಪಂಪ್‍ಸೆಟ್ ಗಳನ್ನು ಘಟಕಗಳಿಗೆ ಅಳವಡಿಸುವು ದರೊಂದಿಗೆ ಯೋಜನೆಯನ್ನು 2017 ರಲ್ಲಿ ಲೋಕಾರ್ಪಣೆಗೊಳಿಸ ಬೇಕಾಗಿತ್ತು.

ಆದರೆ ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯಲ್ಲಿ ಜಾಗದ ತಕರಾರು ಕಾರಣದಿಂದ ವೆಟ್‍ವೆಲ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ ಎಂಬುದು ಅಧಿಕಾರಿಗಳ ವಾದವಾದರೆ, ಈ ತಕರಾರು ಅಂತ್ಯ ಗೊಂಡರೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನುವುದು ಜನರ ಅಭಿಪ್ರಾಯವಾಗಿದೆ.

ರೂ. 6.5 ಕೋಟಿ ವೆಚ್ಚದಲ್ಲಿ ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಬೇಕಾದ ಎಸ್‍ಟಿಪಿ ಘಟಕ ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ. ಸಂಬಂಧಿಸಿದ ಕಾಮಗಾರಿ ಕೈಗೆತ್ತಿಕೊಂಡಿದ್ದ ಹೈದರಾಬಾದ್ ಮೂಲದ ಗುತ್ತಿಗೆದಾರರು ಮಾತ್ರ ತನಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂಬಂತೆ ಕಳೆದ ಮೂರು ವರ್ಷಗಳ ಹಿಂದೆಯೇ ಸ್ಥಳದಿಂದ ಕಾಲ್ಕಿತ್ತಿರುವುದು ಎಲ್ಲರಿಗೂ ತಿಳಿದ ವಿಷಯ.

ಈಗಾಗಲೆ 71 ಕಿಮೀ ಉದ್ದದ ಕೊಳವೆ ಮಾರ್ಗ ಕಾಮಗಾರಿ ಸಂಪೂರ್ಣಗೊಂಡಿದ್ದು ಉಳಿದಂತೆ 600 ಮೀ ಉದ್ದದ ವ್ಯಾಪ್ತಿಯಲ್ಲಿ ಪೈಪ್‍ಲೈನ್ ಅಳವಡಿಸುವುದು, ಎಸ್‍ಟಿಪಿ ಕಾಮಗಾರಿ ನಡೆಯ ಬೇಕಾಗಿದ್ದು ಅಂದಾಜು ಶೇ. 40 ರಷ್ಟು ಕೆಲಸ ಪೂರ್ಣಗೊಳ್ಳಬೇಕಾಗಿದೆ. ಗುತ್ತಿಗೆದಾರರಿಗೆ ರೂ. 35 ಕೋಟಿ ಹಣ ಪಾವತಿಸಲಾಗಿದೆ ಎಂದು ಒಳಚರಂಡಿ ಯೋಜನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಮಗಾರಿ ಅಪೂರ್ಣ ಗೊಂಡಿರುವ ಬಗ್ಗೆ ಸ್ಥಳೀಯ ಸಂಘಸಂಸ್ಥೆಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಹಿಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸ್ಥಳ ಪರಿಶೀಲನೆ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಯಾವುದೇ ರೀತಿಯ ಫಲ ನೀಡಿಲ್ಲ.

ಈ ನಡುವೆ ಸ್ಥಳೀಯ ನಗರ ಹಿತರಕ್ಷಣಾ ಸಮಿತಿ ಸದಸ್ಯರ ತಂಡದ ಕೆಲವು ಸದಸ್ಯರು ಧರಣಿ ಸತ್ಯಾಗ್ರಹ ಕೂಡ ಹಮ್ಮಿಕೊಂಡಿದ್ದು ನಂತರದ ದಿನದಲ್ಲಿ ಕೂಡ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಸಣ್ಣ ಪುಟ್ಟ ವಿಷಯಗಳನ್ನು ಇಟ್ಟುಕೊಂಡು ಚರ್ಚಿಸುವ ಸ್ಥಳೀಯ ನಾಯಕರುಗಳು, ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಯಾವುದೇ ಚಕಾರ ಎತ್ತದೆ ದಿವ್ಯ ಮೌನಕ್ಕೆ ಶರಣಾಗಿರುವುದು ಜನರಲ್ಲಿ ಸಂಶಯಕ್ಕೆ ಎಡೆಮಾಡಿದೆ. ಮಾಡಿದ ಕಾಮಗಾರಿ ಕಳೆದ ಮೂರು ವರ್ಷಗಳ ಮಳೆಯಲ್ಲಿ ಕೊಚ್ಚಿ ಹೋಗಿದ್ದು ಅದರಿಂದ ಹೊರಸೂಸುವ ಕಲುಷಿತ ನೀರು ಇಡೀ ವಾತಾವರಣವನ್ನು ಹದಗೆಡಿಸುತ್ತಿದೆ. ಕಾಮಗಾರಿಯ ಶೇ. 50 ರಿಂದ 60 ಭಾಗ ಕಾವೇರಿ ನದಿ ಪ್ರವಾಹದಲ್ಲಿ ಮುಳುಗಿ ಹೋಗುವುದರೊಂದಿಗೆ ಕುಸಿದಿರುವ ದೃಶ್ಯಗಳು ಯೋಜನೆಯ ಅವೈಜ್ಞಾನಿಕತೆ ಎದ್ದು ಕಾಣುವಂತಿದೆ.

ಪ್ರಸಕ್ತ ಕುಶಾಲನಗರದ ಮತ್ತು ನೆರೆಯ ಗ್ರಾಮಗಳ ಭಾರೀ ಪ್ರಮಾಣದ ಕಲುಷಿತ ತ್ಯಾಜ್ಯಗಳು ನೇರವಾಗಿ ಜೀವನದಿ ಕಾವೇರಿಗೆ ಸೇರುತ್ತಿದ್ದು ಈ ಮೂಲಕ ನೀರಿನ ಗುಣಮಟ್ಟ ಕೆಳದರ್ಜೆಗೆ ಇಳಿಯುವುದರೊಂದಿಗೆ ನದಿ ನೀರು ಬಳಕೆಗೆ ಯೋಗ್ಯವಲ್ಲ ಎನ್ನುವ ಆತಂಕಕಾರಿ ವರದಿಗಳು ಕೂಡ ಹೊರಬಿದ್ದಿದೆ.

ಅಪೂರ್ಣ ಕಾಮಗಾರಿ ನಡುವೆ ಕೆಲವು ಬಡಾವಣೆಗಳಿಂದ ಶೌಚ ತ್ಯಾಜ್ಯವನ್ನು ನೇರವಾಗಿ ಒಳಚರಂಡಿ ಪೈಪ್‍ಗಳಿಗೆ ಸಂಪರ್ಕ ಕಲ್ಪಿಸಿರುವುದು ಕೂಡ ಕೆಲವೆಡೆ ಕಾಣಬಹುದು. ಅಂತಿಮವಾಗಿ ತಗ್ಗು ಪ್ರದೇಶಗಳಲ್ಲಿ ಈ ನೀರು ಹರಿದು ನದಿ ಸೇರುವುದು ಹಲವೆಡೆ ಕಂಡುಬರುತ್ತಿರುವ ದೃಶ್ಯವಾಗಿದೆ. ಉತ್ತಮ ಉದ್ದೇಶ ಹೊತ್ತು ಕುಶಾಲನಗರಕ್ಕೆ ಸರಕಾರ ಕಲ್ಪಿಸಿದ ಯೋಜನೆಯೊಂದು ಅವೈಜ್ಞಾನಿಕ ವಾಗಿ ನಡೆದು ಸರಕಾರದ ಕೋಟ್ಯಾಂತರ ಹಣ ಪೋಲಾಗು ವುದರೊಂದಿಗೆ ಯೋಜನೆ ಇದೀಗ ನದಿ ಪಾಲಾಗಿ ರುವುದು ಶೋಚನೀಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಮತ್ತೆ ಕಾಮಗಾರಿ ಯನ್ನು ಪ್ರಾರಂಭಿ ಸುವುದ ರೊಂದಿಗೆ ಯೋಜನೆಗೆ ಹಸಿರು ನಿಶಾನೆ ತೋರಿಸಬೇಕಾಗಿದೆ.

- ಚಂದ್ರಮೋಹನ್