ಕುಶಾಲನಗರ, ಆ. 28: ಕೋವಿಡ್ ಸೋಂಕಿತ ವ್ಯಕ್ತಿಗಳ ಹೆಸರಿನಲ್ಲಿ ಕುಶಾಲನಗರದ ಎರಡು ಬಡಾವಣೆಗಳಲ್ಲಿ ಜಿಲ್ಲಾಡಳಿತ ಸೀಲ್‍ಡೌನ್ ಮಾಡಿ ಜನರಿಗೆ ಕಿರಿಕಿರಿ ಉಂಟಾಗುತ್ತಿರುವ ಪ್ರಕರಣ ಕಂಡುಬಂದಿದೆ. ಪಟ್ಟಣದ ಬದ್ರುನ್ನೀಸಾ ಬಡಾವಣೆಯಲ್ಲಿ ಮನೆಯೊಂದನ್ನು ಸೋಂಕಿತನ ಹೆಸರಿನಲ್ಲಿ ಸೀಲ್‍ಡೌನ್ ಮಾಡಲಾಗಿದ್ದು ಈ ಮನೆಯಲ್ಲಿ ಯಾವುದೇ ಸೋಂಕಿತ ವ್ಯಕ್ತಿ ಇಲ್ಲದಿದ್ದರೂ ಸ್ಥಳೀಯ ಪಂಚಾಯ್ತಿ ಅನವಶ್ಯಕವಾಗಿ ಮನೆಯನ್ನು ನಿರ್ಬಂಧಿತ ವಲಯ ಎಂದು ಘೋಷಿಸಿ ಅಮಾಯಕರಿಗೆ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕುಶಾಲನಗರ ಪಟ್ಟಣ ಪಂಚಾಯ್ತಿಯ ಕೆಲವರು ಬದ್ರುನ್ನೀಸಾ ಬಡಾವಣೆಗೆ ಬಂದು ‘ನಿಮ್ಮ ಮನೆಯಲ್ಲಿ ಕೊರೊನಾ ಸೋಂಕು ಪೀಡಿತರು ಇದ್ದಾರೆ ಎಂದು ಹೇಳಿ ತಮ್ಮ ಮನೆ ಮುಖ್ಯ ಗೇಟ್‍ಗೆ ರಿಬ್ಬನ್ ಅಳವಡಿಸಿ ತುಂಬಾ ತೊಂದರೆ ಉಂಟಾಗಿದೆ’ ಎಂದು ಮನೆ ಮಾಲೀಕ ಖಲೀಲ್ ‘ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಎಷ್ಟೇ ಮನವರಿಕೆ ಮಾಡಿದರೂ ಕೇಳದೆ ಜಿಲ್ಲಾಧಿಕಾರಿಗಳ ಆದೇಶ ಪಾಲಿಸುವುದಾಗಿ ಮನೆಯಿಂದ ಹೊರಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಇದರಿಂದ ಮನೆಯಿಂದ ಹೊರಹೋಗಲು ಕೂಡ ಕಷ್ಟ ಉಂಟಾಗಿದೆ, ನೆರೆ ಮನೆಯವರು ಕೂಡ ತಮ್ಮನ್ನು ಸಂಶಯದಿಂದ ನೋಡುವಂತಾಗಿದೆ ಎಂದು ತಿಳಿಸಿರುವ ಖಲೀಲ್ ನಂತರದ ದಿನಗಳಲ್ಲಿ ತಮ್ಮನ್ನು ವಿಚಾರಿಸಲು ಯಾರೂ ಬಾರದ ಸಂದರ್ಭ ಸ್ಥಳೀಯ ಪಪಂ ಸದಸ್ಯರಾದ ಪ್ರಮೋದ್ ಮುತ್ತಪ್ಪ ಅವರ ನೆರವು ಕೋರಿದ್ದಾರೆ.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿರುವ ವಾರ್ಡ್ ಸದಸ್ಯ ಪ್ರಮೋದ್ ಮುತ್ತಪ್ಪ ಇನ್ನೊಂದೆಡೆ ತನ್ನ ವಾರ್ಡ್‍ನ ಬಿಎಂ ರಸ್ತೆಯ ಬ್ಯಾಂಕ್ ಒಂದರ ಬಳಿ ಕಳೆದ ಮೂರು ವಾರಗಳಿಂದ ಮನೆಯೊಂದನ್ನು ಸೀಲ್‍ಡೌನ್ ಮಾಡಲಾಗಿದ್ದು ಈ ಮನೆಯಲ್ಲಿ ಕೂಡ ಪ್ರಸಕ್ತ ಯಾರೂ ಸೋಂಕಿತ ವ್ಯಕ್ತಿಗಳು ವಾಸವಾಗಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಸೋಂಕಿತ ವ್ಯಕ್ತಿಗಳು ತಪ್ಪು ವಿಳಾಸ ನೀಡಿದ ಹಿನ್ನೆಲೆಯಲ್ಲಿ ಈ ರೀತಿಯ ಪರಿಸ್ಥಿತಿ ಸೃಷ್ಟಿಯಾಗಿದೆ. ವಾಸ್ತವಾಂಶವೆಂದರೆ ನೈಜವಾದ ಸೋಂಕಿತ ವ್ಯಕ್ತಿ ಕೂಡುಮಂಗಳೂರು ವ್ಯಾಪ್ತಿಯಲ್ಲಿದ್ದು ಆ ಮನೆಯನ್ನು ಸೀಲ್‍ಡೌನ್ ಮಾಡದೆ ಕೇವಲ ಆದೇಶದ ಹಿನ್ನೆಲೆಯಲ್ಲಿ ಅಮಾಯಕರ ಮನೆಯನ್ನು ಸೀಲ್‍ಡೌನ್ ಮಾಡಿ ಯಡವಟ್ಟು ಮಾಡಿರುವುದು ಕಂಡುಬಂದಿದೆ. ಕೂಡಲೆ ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳುವಂತೆ ಪ್ರಮೋದ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

-ಚಂದ್ರಮೋಹನ್