ಸೋಮವಾರಪೇಟೆ, ಆ. 28: ತಾಲೂಕಿನ ಸಿದ್ಧಲಿಂಗಪುರ ಗ್ರಾಮದ ಅರಸಿನಗುಪ್ಪೆ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಪಂಚಮಿ ಪೂಜೆ ಹಾಗೂ ಸರಳ ವಿವಾಹ ಕಾರ್ಯಕ್ರಮ, ದೇವಾಲಯದ ಪ್ರಧಾನ ಗುರುಗಳಾದ ಶ್ರೀರಾಜೇಶ್‍ನಾಥ್‍ಜೀ ಅವರ ಪೌರೋಹಿತ್ವದಲ್ಲಿ ನೆರವೇರಿತು.

ಪಂಚಮಿ ಪೂಜೆಯ ಅಂಗವಾಗಿ ಅರಸಿನಗುಪ್ಪೆ ಗ್ರಾಮದ ಶ್ರೀ ಗಣಪತಿ ಯುವಕ ಸಂಘದ ವತಿಯಿಂದ ವಿಶೇಷ ಪೂಜೆ, ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಗೌರಿ ಗಣಪತಿ ಉತ್ಸವಕ್ಕಾಗಿ ಮೀಸಲಿಟ್ಟಿದ್ದ ರೂ. 30 ಸಾವಿರ ಹಣವನ್ನು ಸಂಘದ ಪದಾಧಿಕಾರಿಗಳು, ದೇವಾಲಯದ ಪೂಜಾಕಾರ್ಯಗಳಿಗೆ ಹಸ್ತಾಂತರಿಸಿದರು.

ಪಂಚಮಿ ಪೂಜೋತ್ಸವದ ಅಂಗವಾಗಿ ಶ್ರೀಮಂಜುನಾಥ ಸನ್ನಿಧಿಯಲ್ಲಿ ಗಣಪತಿ ಹೋಮ, ಅಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ನಡೆಯಿತು. ನವನಾಗ ಕ್ಷೇತ್ರದಲ್ಲಿ ಪಂಚಮಿಯ ವಿಶೇಷ ಪೂಜೆಗಳು ಅರ್ಚಕ ಜಗದೀಶ್ ಉಡುಪ ನೇತೃತ್ವದಲ್ಲಿ ನೆರವೇರಿದವು. ಇದೇ ಸಂದರ್ಭ ಸಿದ್ಧಲಿಂಗಪುರ ಗ್ರಾಮದ ರಾಜೇಶ್ ಮತ್ತು ಬೆಂಗಳೂರಿನ ಲಕ್ಷ್ಮೀ ಅವರುಗಳ ಸರಳ ವಿವಾಹ ನೆರವೇರಿತು. ಗ್ರಾಮಸ್ಥರು ಹಾಗೂ ಭಕ್ತಾದಿಗಳ ಪರವಾಗಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಪಂಡ ಮುತ್ತಪ್ಪ ಹಾಗೂ ಪದಾಧಿಕಾರಿಗಳು, ಶ್ರೀಕ್ಷೇತ್ರದ ಗುರುಗಳಾದ ರಾಜೇಶ್‍ನಾಥ್‍ಜೀ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಮೋಹನ್, ಕಾರ್ಯ ದರ್ಶಿ ರಮೇಶ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಕಾಶ್, ಪ್ರಮುಖರಾದ ಕಿಶೋರ್‍ಕುಮಾರ್, ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.