ಕುಶಾಲನಗರ, ಆ. 27: ಕುಶಾಲನಗರದ ಮಾರುಕಟ್ಟೆ ರಸ್ತೆಯಲ್ಲಿ ಬುಧವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸೇರಿದ ಪ್ರಕರಣದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ಗಣೇಶ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಮೂಲತಃ ಸಂಪಾಜೆಯ ಕಲ್ಲುಗುಂಡಿ ನಿವಾಸಿ ತಿರುಚೆಲ್ವ ಬಂಧಿತ ಆರೋಪಿ. ಗುಜರಿ ವ್ಯಾಪಾರ ನಡೆಸುತ್ತಿದ್ದ ಆರೋಪಿ ತಿರುಚೆಲ್ವ ಮತ್ತು ಕುಶಾಲನಗರ ದಂಡಿನಪೇಟೆ ನಿವಾಸಿ ಮಹಮ್ಮದ್ ರಫೀಕ್ ನಡುವೆ ಹಣಕಾಸಿನ ವಿಚಾರಕ್ಕೆ ವೈಯಕ್ತಿಕ ಜಗಳ ನಡೆದಿದೆ. ಈ ಸಂದರ್ಭ ಮದ್ಯದ ಅಮಲಿನಲ್ಲಿ ತಿರುಚೆಲ್ವ ಮಹಮ್ಮದ್ ರಫೀಕ್ ಗೆ ತಕ್ಕಡಿಯಿಂದ ತಲೆಗೆ ಹಲ್ಲೆ ನಡೆಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ತಲೆಗೆ ತಕ್ಕಡಿಯ ಮುಳ್ಳು ಚುಚ್ಚಿದ್ದ ಸ್ಥಿತಿಯಲ್ಲಿ ರಫೀಕ್ ಮಾರುಕಟ್ಟೆ ರಸ್ತೆ ಬದಿಯಲ್ಲಿ ಬಿದ್ದಿದ್ದ. ಸ್ಥಳೀಯರು ಆತನನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ವಿಷಯ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಕುಶಾಲನಗರ ಪೆÇಲೀಸರು ಸಂಜೆ ವೇಳೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ರಫೀಕ್ ನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದ್ದು ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.