ಮಡಿಕೇರಿ, ಆ. 27: ಸರ್ಕಾರ ಅಸಹಾಯಕ, ಅಶಕ್ತ ವ್ಯಕ್ತಿಗಳಿಗಾಗಿ ಹಾಗೂ ನಿರ್ಗತಿಕ ವಿಧವೆಯರಿಗೆ ಮತ್ತು ವಿಶೇಷಚೇತನರಿಗೆ ಅನೇಕ ಸಾಮಾಜಿಕ ಭದ್ರತೆ ಯೋಜನೆ ಜಾರಿಗೊಳಿಸಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ, ವಿಧವಾ ಪಿಂಚಣಿ ಯೋಜನೆ, ಅಂಗವಿಕಲ ಪಿಂಚಣಿ, ಸಂಧ್ಯಾ ಸುರಕ್ಷಾ ವೇತನ, ಮನಸ್ವಿನಿ, ಮೈತ್ರಿ ಯೋಜನೆಗಳಾಗಿವೆ.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 7419 ಮಂದಿ ಮಾಸಾಶನ ಪಡೆಯುತ್ತಿದ್ದು, ಮಡಿಕೇರಿಯ ತಾಲೂಕಿನಲ್ಲಿ 1041, ಸೋಮವಾರಪೇಟೆಯ ತಾಲೂಕಿನಲ್ಲಿ 3899 ಮತ್ತು ವೀರಾಜಪೇಟೆ ತಾಲೂಕಿನಲ್ಲಿ 2479 ಮಂದಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ.
ಈ ಯೋಜನೆಗೆ 60 ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರಾಗಿರಬೇಕು. ಬಡತನ ರೇಖೆಗಿಂತ (ಬಿಪಿಎಲ್) ಕೆಳಗಿರಬೇಕು, ಅಂತಹ ವ್ಯಕ್ತಿಯು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಯಾವುದೇ ತರಹದ ಪಿಂಚಣಿ ಮತ್ತಿತರವನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತಿರಬಾರದು. ಪಿಂಚಣಿ ಮೊತ್ತ (ಪ್ರತಿ ತಿಂಗಳಿಗೆ) ವಯಸ್ಸು 60-64 ಇರುವವರಿಗೆ ರೂ. 600, 65 ವರ್ಷ ಮೇಲ್ಪಟ್ಟವರಿಗೆ ರೂ. 1000 ನಿಗದಿಪಡಿಸಲಾಗಿದೆ.
ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆ ಒದಗಿಸಲು ಈ ಮಾಸಾಶನಕ್ಕೆ ಅರ್ಹರಾಗಿದ್ದಾರೆ. ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ. 12 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ ರೂ. 17 ಸಾವಿರಕ್ಕಿಂತ ಕಡಿಮೆ ಇರಬೇಕು.
ಹದಿನೆಂಟು ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿರ್ಗತಿಕ ವಿಧವೆಯರಿಗೆ ವಿಧವಾ ವೇತನ ಸರ್ಕಾರದಿಂದ ನೀಡಲಾಗುತ್ತದೆ. ನಿರ್ಗತಿಕ ವಿಧವೆ ಅಂದರೆ, ಪತಿ ಜೀವಿಸಿಲ್ಲದ ಅಥವಾ ಕಾನೂನು ರೀತ್ಯಾ ಮೃತಪಟ್ಟಿರುವನೆಂದು ಭಾವಿಸುವವನ ಪತ್ನಿ ಮತ್ತು ಅವಳ ಸಂಬಂಧಿಕ ಒಬ್ಬ ಸ್ತ್ರೀಗೆ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ. 12 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ ರೂ. 17 ಸಾವಿರಕ್ಕಿಂತ ಕಡಿಮೆ ಇರಬೇಕು.
65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯಡಿ ಒಂದು ಸಾವಿರ ರೂಪಾಯಿ ಮಾಸಾಶನ ಪಡೆಯುತ್ತಾರೆ. ಸಣ್ಣ ರೈತರು, ಅತೀ ಸಣ್ಣ ರೈತರು, ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಅಸಂಘಟಿತ ವಲಯದ ಕಾರ್ಮಿಕರು, ಅರ್ಜಿ ಸಲ್ಲಿಸಬಹುದಾಗಿದೆ.
ಮನಸ್ವಿನಿ ಯೋಜನೆ: ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದೊಳಗಿನ ಅವಿವಾಹಿತ ಹಾಗೂ ವಿಚ್ಛೇದನ ಪಡೆದಿರುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮನಸ್ವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಯೋಜನೆಗೆ ಅಟಲ್‍ಜಿ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಅವಿವಾಹಿತರು ವಿವಾಹ ಆಗಿಲ್ಲವೆಂದು ಹಾಗೂ ವಿಚ್ಛೇದಿತರು, ವಿಚ್ಛೇದನ ಪಡೆದಿರುವ ಬಗ್ಗೆ ಸ್ವಯಂ ಪ್ರಮಾಣ ಪತ್ರ ಸಲ್ಲಿಸಬೇಕು.
ಮೈತ್ರಿ: ಬಡತನ ರೇಖೆಗಿಂತ ಕೆಳಗಿರುವ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಮೈತ್ರಿ ಯೋಜನೆ ರೂಪಿಸಿದ್ದು, ಪ್ರಯೋಜನ ಪಡೆಯಬಹುದಾಗಿದೆ.
ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆ: ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ 2019ನೇ ಸಾಲಿನಲ್ಲಿ ಖಾಲಿ ಇದ್ದ 79 ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ (ಪುರುಷ ಮತ್ತು ಮಹಿಳೆ) ಹಾಗೂ 54 ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಯ ದ್ವಿತೀಯ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕೊಡಗು ಜಿಲ್ಲಾ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ ಸಮಿತಿಯು ಆಗಸ್ಟ್ 19 ರಂದು ತಯಾರಿಸಿ ಜಿಲ್ಲಾ ಪೊಲೀಸ್ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ದ್ವಿತೀಯ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತಾ. 28 ರಂದು ಬೆಳಿಗ್ಗೆ 8.30 ಗಂಟೆಗೆ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆಗಾಗಿ ಜಿಲ್ಲಾ ಪೊಲೀಸ್ ಕಚೇರಿ, ಮಡಿಕೇರಿ ಇಲ್ಲಿಗೆ ಹಾಜರಾಗಲು ಪೊಲೀಸ್ ನೇಮಕಾತಿ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.