ಸೋಮವಾರಪೇಟೆ, ಆ. 26: ವನ್ಯಪ್ರಾಣಿಯನ್ನು ಬೇಟೆಯಾಡಿದ್ದ ಆರೋಪಿಯನ್ನು ಬಂಧಿಸಲು ತೆರಳಿದ ಅರಣ್ಯ ಇಲಾಖಾ ಸಿಬ್ಬಂದಿಗಳ ಮೇಲೆ ಮಾರಕಾಯುಧದಿಂದ ಧಾಳಿ ನಡೆಸಿದ ಘಟನೆ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ನಡೆದಿದೆ.
ಕಾಜೂರು ಗ್ರಾಮದ ಅರಣ್ಯದಿಂದ ವನ್ಯಪ್ರಾಣಿಯನ್ನು ಬೇಟೆಯಾಡಿ, ಮಾಂಸ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಜೂರು ಗ್ರಾಮದ ಬಿ.ಜಿ. ವಸಂತ್ ಅಲಿಯಾಸ್ ರುದ್ರ ಎಂಬಾತನ ಮನೆಗೆ ತೆರಳಿದ ಅರಣ್ಯಾಧಿಕಾರಿಗಳ ಮೇಲೆ ಧಾಳಿ ನಡೆಸಲಾಗಿದೆ.
ಕಾಜೂರಿನ ವಸಂತ್, ಭೀಮಯ್ಯ ಅಲಿಯಾಸ್ ಮಣಿ, ಸುಬ್ರಮಣಿ ಅಲಿಯಾಸ್ ಕೂಸ ಅವರುಗಳು ಕಾಜೂರು ಅರಣ್ಯ ವ್ಯಾಪ್ತಿಯಲ್ಲಿ ಉರುಳು ಹಾಕಿ ವನ್ಯಪ್ರಾಣಿಯನ್ನು ಬೇಟೆಯಾಡಿದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ವಸಂತ್ ಮನೆಯ ಮೇಲೆ ನಿನ್ನೆ ರಾತ್ರಿ 9.30ರ ಸುಮಾರಿಗೆ ಡಿಆರ್‍ಎಫ್‍ಓ ಚಂದ್ರೇಶ್, ಅರಣ್ಯ ರಕ್ಷಕ ಲೋಕೇಶ್, ಚಾಲಕ ನಂದೀಶ್, ಸಿಬ್ಬಂದಿಗಳಾದ ತಿಮ್ಮಯ್ಯ, ಪ್ರಸಾದ್ ಅವರುಗಳ ತಂಡ ಧಾಳಿ ನಡೆಸಿದೆ.
ಈ ಸಂದರ್ಭ ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿ ಇಟ್ಟಿದ್ದ 3 ಕೆ.ಜಿ. ವನ್ಯಪ್ರಾಣಿಯ ಮಾಂಸವನ್ನು ವಶಕ್ಕೆ ಪಡೆಯುತ್ತಿದ್ದಂತೆ, ಆರೋಪಿ ವಸಂತ್ ಮನೆಯೊಳಗಿನಿಂದ ಕತ್ತಿ ತಂದು ವಾಚರ್ ಪ್ರಸಾದ್ ಅವರಿಗೆ ಬೀಸಿದ್ದಾನೆ. ಜರ್ಕಿನ್ ಧರಿಸಿದ್ದರ ಪರಿಣಾಮ ಪ್ರಸಾದ್ ಅವರ ಬೆನ್ನಿನ ಭಾಗಕ್ಕೆ ಅಲ್ಪ ಗಾಯವಾಗಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಅರಣ್ಯಾಧಿಕಾರಿಗಳನ್ನು ಅಟ್ಟಾಡಿಸಿದ ಆರೋಪಿ ವಸಂತ್‍ನನ್ನು ಕೊನೆಗೂ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಮಾದಾಪುರ ಶಾಖೆಯಲ್ಲಿ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.
ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ತೆರಳಲು ಬಳಸಿದ್ದ ಇಲಾಖಾ ವಾಹನದ ಮೇಲೂ ಧಾಳಿ ನಡೆಸಿದ್ದು, ಬೊಲೆರೊ ವಾಹನದ ಗಾಜುಗಳನ್ನು ಕಲ್ಲಿನಿಂದ ಪುಡಿಗಟ್ಟಲಾಗಿದೆ. ವನ್ಯಪ್ರಾಣಿಯನ್ನು ಬೇಟೆಯಾಡಿದ ಪ್ರಕರಣದ ಇತರ ಆರೋಪಿಗಳಾದ ಭೀಮಯ್ಯ ಮತ್ತು ಸುಬ್ರಮಣಿ ಅವರುಗಳು ತಲೆಮರೆಸಿಕೊಂಡಿದ್ದಾರೆ.
ಅರಣ್ಯ ಇಲಾಖೆಯ ವಾಚರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಇಂದು ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ವಸಂತ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.