ಸಿದ್ದಾಪುರ, ಆ. 26: ಸಿದ್ದಾಪುರದ ಗುಹ್ಯ ಶ್ರೀ ಅಗಸ್ತೇಶ್ವರ ಸಹಕಾರ ಸಂಘದ ವತಿಯಿಂದ ಕೊರೊನಾ ವಾರಿಯರ್ಸ್ ಹಾಗೂ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಸಹಾಯ ಧನ ನೀಡಲಾಯಿತು.
ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ 9 ಮಂದಿ ಆಶಾ ಕಾರ್ಯಕರ್ತರಿಗೆ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಲಾಭಾಂಶದಲ್ಲಿ 9 ಮಂದಿ ಆಶಾ ಕಾರ್ಯಕರ್ತರಿಗೆ ತಲಾ ರೂ. 3000 ದಂತೆ ಧನ ಸಹಾಯ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ಮಾತನಾಡಿ ಕೊರೊನಾ ವೈರಸ್ ದೇಶದಲ್ಲಿ ವೇಗವಾಗಿ ಹಬ್ಬುತ್ತಿದ್ದು, ಇದೀಗ ಗ್ರಾಮಾಂತರ ಪ್ರದೇಶಗಳಲ್ಲೂ ಕೂಡ ವೈರಸ್ ಪತ್ತೆಯಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಆಶಾ ಕಾರ್ಯಕರ್ತರು ಹಗಲಿರುಳು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಂ. ಬಿಜೋಯ್, ಕಾರ್ಯನಿರ್ವಹಣಾ ಅಧಿಕಾರಿ ಕೆ.ಬಿ. ಪ್ರಸನ್ನ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು.