ಸೋಮವಾರಪೇಟೆ, ಆ. 26: ಪ್ರತಿ ವರ್ಷದ ಮಳೆಗಾಲ ಸಂದರ್ಭ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದ್ದು, ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿದೆ. ಇದು ಪ್ರತಿವರ್ಷ ಪುನರಾವರ್ತನೆಯಾಗುತ್ತಿದ್ದು, ತಕ್ಷಣವೇ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಮಳೆಗಾಲದ ಸಂದರ್ಭ ವಿದ್ಯುತ್ ಸಂಪರ್ಕ ಇರುವದಿಲ್ಲ. ಇದರಿಂದ ರೈತರು, ಕಾಫಿ ಬೆಳೆಗಾರರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಗ್ರಾಮೀಣ ಭಾಗಕ್ಕೆ ವಿದ್ಯುತ್ ಸಂಪರ್ಕವನ್ನು ಕೇಬಲ್ ಮುಖಾಂತರ ಭೂಮಿಯೊಳಗೆ ಅಳವಡಿಸಿ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಜಮ್ಮಾ ಉಂಬಳಿ ಜಾಗಗಳು ಹೆಚ್ಚಾಗಿದ್ದು, ಆರ್‍ಟಿಸಿಯಲ್ಲಿ ಕುಟುಂಬದ ಸದಸ್ಯರುಗಳ ಹೆಸರುಗಳು ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ರೈತರಿಗೆ ತಮ್ಮ ಹಿಡುವಳಿ ನಮೂದಿಸಲು ಸಾಧ್ಯವಾಗುವದಿಲ್ಲ. ಕಂದಾಯ ಇಲಾಖೆಯಲ್ಲಿ ಪೋಡಿ ಕಡತಗಳು ವಿಲೇವಾರಿಯಾಗಲು ಬಹಳಷ್ಟು ಬಾಕಿ ಇವೆ. ದಾಖಲೆಗಳು ಸರಿಯಾಗದೇ ಇರುವದರಿಂದ ಜಮೀನಿನ ಸರ್ವೆ ನಂಬರ್ ಜಿಪಿಎಸ್ ಮ್ಯಾಪ್ ತೆಗೆಸಲು ಶೇ. 80 ರಷ್ಟು ರೈತರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.