ಕರಿಕೆ, ಆ. 26: ಅಂತರ್ರಾಜ್ಯ ಗಡಿಗಳಲ್ಲಿ ಸಂಚಾರಕ್ಕೆ ತಡೆ ಮಾಡಬಾರದೆಂದು ಕೇರಳ ಉಚ್ಚ ನ್ಯಾಯಾಲಯವು ಕೇರಳ ಸರಕಾರಕ್ಕೆ ಮಧ್ಯಂತರ ಆದೇಶ ನೀಡಿದರೂ ಕರಿಕೆ-ಚೆಂಬೇರಿ-ಪಾಣತ್ತೂರು ಬಳಿ ಗಡಿಯಲ್ಲಿ ಅಳವಡಿಸಿದ ಗೇಟ್ ಮಾತ್ರ ತೆರವುಗೊಳಿಸದೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೇಂದ್ರ ಸರಕಾರದ ಗೃಹ ಸಚಿವಾಲಯವು ಇತ್ತೀಚೆಗಷ್ಟೆ ದೇಶದಾದ್ಯಂತ ಅಂತರ್ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲದೆ ಅವಕಾಶ ನೀಡಿತ್ತು. ಆದರೂ ಕೇರಳ ರಾಜ್ಯದ ಗಡಿ ಭಾಗಗಳಾದ ಕರಿಕೆ, ಅಡೂರು, ಬಂದಡ್ಕ ಹಾಗೂ ಸಾರಡ್ಕಗಳಲ್ಲಿ ಸಂಚಾರಕ್ಕೆ ತಡೆಹಿಡಿಯಲಾಗಿತ್ತು.
ಗಡಿ ತೆರೆಯದೆ ಇದ್ದದನ್ನು ಪ್ರಶ್ನಿಸಿ ವಕೀಲರೂ ಆದ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ಕೇರಳ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಿಚಾರಣೆ ನಡೆಸಿದ ಉಚ್ಚ ನ್ಯಾಯಲಯವು ಇಂದು ಕೇರಳ ಸರಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.ಇದರಿಂದಾಗಿ ಕರ್ನಾಟಕ-ಕೇರಳ ಸಂಪರ್ಕಿಸುವ ಸುಳ್ಯ, ಜಾಲ್ಸೂರು, ಕಾಸರಗೋಡು ರಸ್ತೆಯ ಕೊಟ್ಯಾಡಿ, ಪನತ್ತಡಿ ಪಂಚಾಯಿತಿಯ ಪಾಣತ್ತೂರು, ಭಾಗಮಂಡಲ ರಸ್ತೆಯ ಚೆಂಬೇರಿ, (ಮೊದಲ ಪುಟದಿಂದ) ಬಂದಡ್ಕ, ಮಾಣಿಮೂಲೆ ರಸ್ತೆ ಹಾಗೂ ವಿಟ್ಲ-ಸಾರಡ್ಕ ಗಡಿಗಳ ಚೆಕ್ಪೋಸ್ಟ್ ತಡೆಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದೆ. ಈ ಆದೇಶದಿಂದ ಕರ್ನಾಟಕದ ನಾಲ್ಕು ಗಡಿಗಳಿಂದ ಕೇರಳಕ್ಕೆ ತೆರಳಲು ವಾಹನ ಸಂಚಾರಕ್ಕೆ ಅನುಕೂಲ ದೊರೆತಂತಾಗಿದೆ. ಆದರೆ ನ್ಯಾಯಾಲಯದ ಆದೇಶ ಹೊರಬಿದ್ದರೂ ಬುಧವಾರ ಸಂಜೆಯವರೆಗೆ ಕೊಡಗಿನ ಗಡಿ ಗ್ರಾಮ ಕರಿಕೆ, ಚೆಂಬೇರಿ, ಪಾಣತ್ತೂರು ಬಳಿ ಗಡಿಯಲ್ಲಿ ಅಳವಡಿಸಿದ ಗೇಟ್ ತೆರವುಗೊಳಿಸಿರಲಿಲ್ಲ.
- ಸುಧೀರ್ ಹೊದ್ದೆಟ್ಟಿ