ಮಡಿಕೇರಿ, ಆ. 25: ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿರುವ ಸೂರಜ್ ಅಯ್ಯಪ್ಪ ಅವರು ಅಮೇರಿಕದ ನೇವಲ್ ವಾರ್ ಕಾಲೇಜಿನಲ್ಲಿ ತರಬೇತಿ ಪಡೆಯಲು ಭಾರತೀಯ ನೌಕಾಪಡೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ನೌಕಾಪಡೆಯಲ್ಲಿ ಹಲವು ಪ್ರಮುಖ ಜವಾಬ್ದಾರಿ ನಿಭಾಯಿಸಿರುವ ಅವರು, 2010ರಲ್ಲಿ ಭಾರತೀಯ ನೌಕಪಡೆಯನ್ನು ಖಡ್ಗ ಗೌರವ ಮತ್ತು ನೌಕಾಪಡೆಯ ಮುಖ್ಯಸ್ಥರ ಚಿನ್ನದ ಪದಕದೊಂದಿಗೆ ಸೇನೆಗೆ ಸೇರಿದರು. 2016ರಲ್ಲಿ ಭಾರತದ ರಾಷ್ಟ್ರಪತಿಯವರು ವಿಶಾಖ ಪಟ್ಟಣಕ್ಕೆ ಭೇಟಿ ನೀಡಿದಾಗ ಅವರಿಗೆ, ನೌಕಾಪಡೆಯ ಗೌರವ ರಕ್ಷೆಯನ್ನು ನೀಡುವ ತಂಡದ ಮುಖ್ಯಸ್ಥರಾಗಿ ಸೂರಜ್ ಅಯ್ಯಪ್ಪ ಗಮನ ಸೆಳೆದಿದ್ದರು. ಇದೀಗ ತಮ್ಮ ಪ್ರಮುಖ ಜವಾಬ್ದಾರಿಯಲ್ಲಿ ಅಮೇರಿಕದ ನೇವಲ್ ವಾರ್ ಕಾಲೇಜಿ ನಲ್ಲಿ ವಿಶ್ವದ 52 ದೇಶಗಳ ನೌಕಾ ಪಡೆಯ ಅಧಿಕಾರಿಗಳೊಂದಿಗೆ ತಮ್ಮ ತರಬೇತಿಯನ್ನು ಪಡೆಯಲಿದ್ದಾರೆ.

ಮುಕ್ಕಾಟೀರ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಂ.ಎ. ಕಾರ್ಯಪ್ಪ ಎಸ್.ಎಂ ಮತ್ತು ಸರಸ್ವತಿ ಕಾರ್ಯಪ್ಪ (ತಾಮನೆ ಅಣ್ಣಳಮಾಡ) ಅವರ ಪುತ್ರರಾಗಿರುವ ಸೂರಜ್ ಅವರು, ತಮ್ಮ ವ್ಯಾಸಂಗವನ್ನು ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹರಡೂನ್‍ನಲ್ಲಿ ಮುಗಿಸಿ ಮುಂದೆ ನ್ಯಾವಲ್ ಅಕಾಡೆಮಿಯನ್ನು ಸೇರಿ ಅಕಾಡೆಮಿ ಕೆಡೆಟ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದರು.

ಸೂರಜ್ ಅವರ ಹಿರಿಯ ಸಹೋದರಿ ಪೂಜಾ ಕಾರ್ಯಪ್ಪ ಪುಣೆಯಲ್ಲಿರುವ ವಾಸ್ಕನ್ ಇಂಜಿನಿಯರ್‍ಸ್ ಲಿಮಿಟೆಡ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಸೂರಜ್ ಅವರು, ಗೋಣಿಕೊಪ್ಪಲಿನ ಮನೆಯಪಂಡ ಮನು ಮಂದಣ್ಣ ಮತ್ತು ಕಾಮು ದಂಪತಿಗಳ ಪುತ್ರಿ ದಂತ ವೈದ್ಯೆ ಯಮುನಾರನ್ನು ವಿವಾಹವಾಗಿ ದ್ದಾರೆ. ತಮ್ಮ ತಾಯಿ ಈ ಸಾಧನೆಗೆ ಸ್ಫೂರ್ತಿಯಾಗಿದ್ದಾರೆ ಎಂದು ಸೂರಜ್ ಸ್ಮರಿಸುತ್ತಾರೆ.