ಕಣಿವೆ, ಆ. 25: ಸೋಮವಾರಪೇಟೆ ತಾಲೂಕಿನ ವಿವಿಧ ಗಿರಿಜನ ಹಾಡಿಗಳ 22 ಮಂದಿ ಫಲಾನುಭವಿಗಳಿಗೆ ಆರಂಭಿಕವಾಗಿ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಆವರಣದಲ್ಲಿ ಬುಧವಾರ ಶಾಸಕ ಅಪ್ಪಚ್ಚು ರಂಜನ್ ಕುರಿಗಳನ್ನು ವಿತರಿಸಿದರು. ಗಿರಿಜನ ಉಪಯೋಜನೆಯಡಿ ಫಲಾನುಭವಿಗಳಿಗೆ ತಲಾ 32 ಸಾವಿರ ವೆಚ್ಚದಲ್ಲಿ ಮೂರು ಹೆಣ್ಣು ಹಾಗೂ ಒಂದು ಗಂಡು ಕುರಿಯನ್ನು ಒದಗಿಸಲಾಗಿದೆ.
ಜೊತೆಗೆ ಇದೇ 32 ಸಾವಿರ ಅನುದಾನದೊಳಗೆ 5 ಸಾವಿರದ ವಿಮಾ ಪಾಲಿಸಿ ಹಾಗೂ 3 ಸಾವಿರದ ಆಹಾರ ಕಿಟ್ ಸೇರಿರುತ್ತದೆ ಎಂದು ಹೇಳಿದ ಶಾಸಕರು, ಕುರಿಗಳನ್ನು ಪಡೆದ ಫಲಾನುಭವಿಗಳು ಅಚ್ಚುಕಟ್ಟಾಗಿ ಕುರಿಗಳನ್ನು ಸಾಕುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕಾಫಿ ತೋಟದ ಆದಾಯಕ್ಕೆ ಹೋಲಿಸಿದರೆ ಕುರಿ ಮತ್ತು ಆಡು ಸಾಕಣೆಯೇ ಉತ್ತಮವಾದ ಲಾಭದಾಯಕ ಕಸುಬಾಗಿದೆ ಎಂದು ಶಾಸಕ ರಂಜನ್ ಹೇಳಿದರು. ಇದಕ್ಕೂ ಮುನ್ನಾ ಶಾಸಕ ರಂಜನ್, ಪಶುಪಾಲನೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಗಿರಿಜನ ಫಲಾನುಭವಿಗಳಿಗೆ ಉತ್ತಮ ಗುಣಮಟ್ಟದ ಕುರಿ, ಆಡು, ಹಸುಗಳನ್ನು ಖರೀದಿಸಿ ಕೊಡುವ ಮೂಲಕ ಆರ್ಥಿಕವಾಗಿ ಮೇಲೆ ಬರುವಂತೆ ಶ್ರಮಿಸಬೇಕು ಎಂದು ಹೇಳಿದರು.
ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು, ಉಪಾಧ್ಯಕ್ಷ ಮನು, ನಿರ್ದೇಶಕರಾದ ಮೋಹನ್, ಅಣ್ಣಯ್ಯ, ಕಮಲ ಸುರೇಶ್, ಸೋಮವಾರಪೇಟೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ್, ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಶಿವು ಬಾದಾಮಿ, ಗಿರಿಜನ ಇಲಾಖೆಯ ಧರ್ಮಮ್ಮ, ತಾಲೂಕು ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಭಾಗದ ಅಧ್ಯಕ್ಷ ಪ್ರಭಾಕರ್, ಜಿಲ್ಲಾ ಕಾರ್ಯದರ್ಶಿ ಮೋಹನ್, ಸೋಲಿಗ ಸಮುದಾಯದ ತಾಲೂಕು ಅಧ್ಯಕ್ಷ ಕುಮಾರ್ ಮತ್ತಿತರರು ಇದ್ದರು.