*ಕೊಡ್ಲಿಪೇಟೆ, ಆ. 25: ವಿವಿಧ ವೀರಶೈವ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಕೊಡ್ಲಿಪೇಟೆಯ ವೀರಭದ್ರೇಶ್ವರ ದೇವಾಲಯದಲ್ಲಿ ವೀರಭದ್ರ ದೇವರ ಜಯಂತ್ಯೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್, ವೀರಶೈವ ಲಿಂಗಾಯತ, ಜಂಗಮ ಅರ್ಚಕರ ಸಂಘ, ವೀರ ಶೈವ ಲಿಂಗಾಯತ ಸಂಘಟನಾ ವೇದಿಕೆ, ಕೊಡ್ಲಿಪೇಟೆಯ ವೀರಭದ್ರೇಶ್ವರ ದೇವಾಲಯ ಸಮಿತಿ ಹಾಗೂ ವೀರ ಶೈವ ಸಮಾಜದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಪ್ರಪಂಚಕ್ಕೆ ಮಾರಕವಾಗಿರುವ ಕೊರೊನಾ ವೈರಸ್‍ನಿಂದ ಮುಕ್ತಿ, ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿರುವ ಕೊಡಗಿನ ರಕ್ಷಣೆ ಹಾಗೂ ಸುಭೀಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಭಾದ್ರಪದ ಮಾಸದ ಮೊದಲ ಮಂಗಳವಾರದಂದು ನಡೆದ ವೀರಭದ್ರ ಸ್ವಾಮಿಯ ಜಯಂತಿಯ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗಿನಿಂದ ರುದ್ರಾಬಿಷೇಕ, ಅಷ್ಟೋತ್ತರ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಜಯಂತ್ಯೋತ್ಸವದ ಕಾರ್ಯ ಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲು ಮಠದ ಮಹಾಂತ ಸ್ವಾಮೀಜಿ,ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ರುದ್ರಪ್ಪ, ವೀರಶೈವ ಸಮಾಜದ ಅಧ್ಯಕ್ಷ ಯತೀಶ್, ತಾಲೂಕು ವೀರಶೈವ ಸಭಾ ಅಧ್ಯಕ್ಷ ಹಾಲಪ್ಪ, ಜಿಲ್ಲಾ ಮಹಾ ಸಭಾದ ಉಪಾಧ್ಯಕ್ಷ ಕಾಂತರಾಜ್, ಮಮತಾ ಸತೀಶ್, ಕಾರ್ಯದರ್ಶಿ ನಂಜಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಖಜಾಂಚಿ ಡಿ.ಬಿ.ಸೋಮಪ್ಪ, ಕಾರ್ಯದರ್ಶಿ ಜಯರಾಜು, ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಮೋಹನ್ ಮೂರ್ತಿ, ಕಾರ್ಯದರ್ಶಿ ಸೋಮಶೇಖರ್ ಶಾಸ್ತ್ರೀ, ಪ್ರಮುಖರಾದ ಶಿಲ್ಪಿ ವರಪ್ರಸಾದ್, ಪಟೇಲ್ ವಿಶ್ವನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

ವೀರಗಾಸೆ ಕಲಾವಿದ ದೀಪಕ್ ಅವರಿಂದ ವೀರಭದ್ರೇಶ್ವರ ಸ್ವಾಮಿಯ ವೀರಗಾಸೆ ನೃತ್ಯ ನಡೆಯಿತು.