ನಾಪೆÇೀಕ್ಲು, ಆ. 24: ತೋಟದಲ್ಲಿ ಕಾಫಿ, ಕಾಳುಮೆಣಸಿ ನೊಂದಿಗೆ ಬೆಣ್ಣೆ ಹಣ್ಣು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವದ ರಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು ಎಂದು ನಬಾರ್ಡ್ ಸಂಸ್ಥೆಯ ನಿವೃತ್ತ ಜಿಲ್ಲಾ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ ಹೇಳಿದರು.

ನೆಲಜಿ ಫಾರ್ಮರ್ಸ್ ಕ್ಲಬ್, ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನೆಲಜಿ ಫಾರ್ಮರ್ಸ್ ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ನಬಾರ್ಡ್‍ನಿಂದ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಹಲವು ಯೋಜನೆಗಳಿವೆ. ಎಲ್ಲರೂ ಅವುಗಳ ಪ್ರಯೋಜನ ಪಡೆದುಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಮತ್ತು ನಬಾರ್ಡ್ ಆಶ್ರಯದಲ್ಲಿ ಆರಂಭಿಸಲಾದ ಪುತ್ತರಿ ಕೃಷಿ ಉತ್ಪಾದಕರ ಸಂಘದ ಕಾರ್ಯ ವೈಖರಿಗಳ ಬಗ್ಗೆ ಮಾತನಾಡಿದ ಅವರು, ಈ ಸಂಸ್ಥೆಯಲ್ಲಿ ಒಂದು ಸಾವಿರ ಸದಸ್ಯರಿದ್ದಾರೆ. ಈ ಸಂಸ್ಥೆ ಮೂರು ವರ್ಷದಲ್ಲಿ ಕೋಟ್ಯಾಂತರ ರೂ. ವಹಿವಾಟು ನಡೆಸುತ್ತಿದೆ. ಇದಕ್ಕೆ ನಬಾರ್ಡ್‍ನಿಂದ ಅನುದಾನವನ್ನು ನೀಡಲಾಗಿದೆ. ನೆಲಜಿ ಫಾರ್ಮರ್ಸ್ ಕ್ಲಬ್ ವತಿಯಿಂದಲೂ ಇಂತಹ ಒಂದು ಉತ್ತಮ ಕಾರ್ಯಕ್ರಮವನ್ನು ಕೈಗೊಳ್ಳಬಹುದು. ಇದರಿಂದ ಎಲ್ಲರ ಆರ್ಥಿಕ ಪರಿಸ್ಥಿತಿಗಳು ಸುಧಾರಣೆ ಯಾಗಲಿದೆ. ಎಲ್ಲಾ ರೈತರಿಗೂ ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪ್ರಭಾಕರ್ ಮಾತನಾಡಿ, ಬಯೋ ಫರ್ಟಿಲೈಸರ್ಸ್, ಅರ್ಕ ಸೂಕ್ಷ್ಮಾಣುಜೀವಿ ಕಾಳುಮೆಣಸು ಬೆಳೆಗಳಿಗೆ ಉತ್ತಮವಾಗಿದೆ. ಎಲ್ಲಾ ರೈತರು ಮಣ್ಣು ಪರೀಕ್ಷೆ ಮಾಡಿಕೊಳ್ಳು ವದು ಅಗತ್ಯ. ಅದಕ್ಕನುಗುಣವಾಗಿ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರವನ್ನು ಬೆಳೆಗಳಿಗೆ ನೀಡುವದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ಮತ್ತೋರ್ವ ವಿಜ್ಞಾನಿ ಡಾ. ದೇವಯ್ಯ ಮಾತನಾಡಿ, ರೈತರು ಹೆಚ್ಚಿನ ಲಾಭಗಳಿಸಬೇಕಾದರೆ ಹೆಚ್ಚಿನ ಉತ್ಪಾದನೆ ಮಾಡುವದು ಅಗತ್ಯ. ತೋಟಗಳಲ್ಲಿ ಕಾಳುಮೆಣಸಿನ ಬಳ್ಳಿಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕು. ಇರುವ ವ್ಯವಸ್ಥೆಯಲ್ಲಿ ಖರ್ಚು ಕಡಿಮೆ ಮಾಡಿಕೊಂಡು ಆದಾಯ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ತೋಟಗಳ ಮಧ್ಯೆ ಬೆಣ್ಣೆ ಹಣ್ಣು ಗಿಡಗಳನ್ನು ನೆಡುವದರಿಂದ ಆದಾಯ ಹೆಚ್ಚಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಕಾಳುಮೆಣಸಿನ ರೋಗದ ಬಗ್ಗೆ ಮಾತನಾಡಿದ ಅವರು ತೋಟದಲ್ಲಿ ಕನಿಷ್ಟ 10 ಕಾಳುಮೆಣಸು ತಳಿಗಳನ್ನಾದರೂ ಬೆಳೆಯಬೇಕು ಆಗ ಕೆಲವು ತಳಿಗಳಿಗೆ ರೋಗ ಹರಡಿದರೆ ಬಾಕಿ ಇರುವ ತಳಿಗಳು ಫಸಲು ನೀಡುತ್ತವೆ ಎಂದರು.

ಕೇಂದ್ರದ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಮಾತನಾಡಿ ರೋಬಸ್ಟಾ ಕಾಫಿ ಉದುರುವಿಕೆಗೆ ಕೊಳೆರೋಗ, ಹೆಚ್ಚಿದ ನೀರಿನ ತೇವಾಂಶ, ಕಾಫಿ ಕಾಯಿಕಟ್ಟುವ ಸಮಯ ಎಲ್ಲವೂ ಕಾರಣವಾಗುತ್ತದೆ. ಅದಕ್ಕೆ ಜೂನ್ ಮೊದಲ ವಾರದಲ್ಲಿ ಶೇ. 1ರ ಬೋರ್ಡೋ ದ್ರಾವಣ ಸಿಂಪಡಿಸಬೇಕು. ಮಳೆಗಾಲದ ನಂತರ ಕಾಲ್ಸಿಯಂ ನೈಟ್ರೇಟ್ ಅನ್ನು ಒಂದು ಗಿಡಕ್ಕೆ 75ರಿಂದ 100 ಗ್ರಾಂ ನೀಡಬೇಕು. ಅಥವಾ ಅಮೋನಿಯಂ ಸಲ್ಫೇಟ್ ಅನ್ನು ಒಂದು ಗಿಡಕ್ಕೆ 150 ಗ್ರಾಂ ನಂತೆ ನೀಡಬೇಕು. ಇದರಿಂದ ಕಾಯಿ ಉದುರುವಿಕೆ ಮತ್ತು ಎಲೆ ಉದುರುವಿಕೆ ನಿಯಂತ್ರಣಕ್ಕೆ ಬರಲಿದೆ ಎಂದರು. ಕಾಳುಮೆಣಸು, ಅಡಿಕೆ, ಶುಂಠಿಗಳಿಗೂ ಬೋರ್ಡೋ ದ್ರಾವಣ ಸಿಂಪಡಿಸುವದರಿಂದ ಕೊಳೆ ರೋಗ ನಿಯಂತ್ರಿಸಬಹುದು ಎಂದು ಮಾಹಿತಿ ನೀಡಿದರು.

ಹವಾಮಾನ ತಜ್ಞೆ ಸಹನಾ ಹೆಗ್ಡೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲಜಿ ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಮಂಡಿರ ನಂದಾ ನಂಜಪ್ಪ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕೈಬುಲಿರ ಉಮೇಶ್, ಕಾರ್ಯದರ್ಶಿ ಮಂಡಿರ ಸಚಿ ಗಣಪತಿ ಇದ್ದರು.