ಭಾಗಮಂಡಲ, ಆ.21: ತಲಕಾವೇರಿಯಲ್ಲಿ ಕಣ್ಮರೆಯಾದವರ ಪೈಕಿ ಉಳಿದಿಬ್ಬರ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯ ಶನಿವಾರದಿಂದ ಸ್ಥಗಿತಗೊಳ್ಳಲಿದೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಕುರಿತು “ಶಕ್ತಿ” ಗೆ ಮಾಹಿತಿಯಿತ್ತಿದ್ದಾರೆ.ತಾ. 6 ರಂದು ತಲಕಾವೇರಿಯಲ್ಲಿ ಬೆಟ್ಟದ ಭಾಗದ ಕುಸಿತದಿಂದ ಅರ್ಚಕರ ಎರಡು ಮನೆಗಳು ನೆಲ ಸಮವಾಗಿ ಐವರು ಭೂ ಸಮಾಧಿಯಾಗಿದ್ದರು. ಅವರ ಪೈಕಿ ಪ್ರಧಾನ ಅರ್ಚಕ ನಾರಾಯಣಾಚಾರ್, ಅವರ ಸಹೋದರ ಸ್ವಾಮಿ ಆನಂದತೀರ್ಥರು ಹಾಗೂ ಸಹಾಯಕ ಅರ್ಚಕ ರವಿಕಿರಣ್ ಇವರುಗಳ ಮೃತದೇಹಗಳು ಪತ್ತೆಯಾಗಿದ್ದವು.. ಶಾಂತ ನಾರಾಯಣಾಚಾರ್ ಹಾಗೂ ಶ್ರೀನಿವಾಸ್ ಪಡ್ಡಿಲಾಯ- ಇವರಿಬ್ಬರ ಸುಳಿವು ಇದುವರೆಗೆ ಲಭ್ಯವಾಗಲಿಲ್ಲ. ಆದರೆ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಪೊಲೀಸ್, ಅರಣ್ಯ ಸಿಬ್ಬಂದಿ ಸೇರಿದಂತೆ ಎಲ್ಲ ತಂಡಗಳೂ ಗರಿಷ್ಠ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿರುವದಾಗಿ ಖಚಿತಪಡಿಸಿವೆ. ಈ ಕುರಿತಾದ ವರದಿಯನ್ನು ಎಸ್‍ಪಿ ಮತ್ತು ತಹಶೀಲ್ದಾರ್ ಸರಕಾರಕ್ಕೆ ಕಳುಹಿಸಲಿದ್ದಾರೆ.

ಶೋಧ ಕಾರ್ಯಾಚರಣೆಯನ್ನು ಶನಿವಾರದಿಂದ ಸ್ಥಗಿತಗೊಳಿಸಲಾಗುವದು ಎಂದು ಜಿಲ್ಲಾಧಿಕಾರಿ ಖಚಿತಪಡಿಸಿದ್ದಾರೆ. ಅಲ್ಲದೆ, ಸರಕಾರಕ್ಕೆ ಕಳುಹಿಸಲಿರುವ ವರದಿಯಲ್ಲಿ ಜಿಲ್ಲೆಯಲ್ಲಿ 2018 ಮತ್ತು 2019 ರ ಪ್ರಾಕೃತಿಕ ವಿಕೋಪದಲ್ಲಿ ಮಾಡಿದ್ದಂತೆಯೇ ಮೃತದೇಹಗಳು ದೊರಕದ ಪ್ರಕರಣದಲ್ಲಿಯೂ ಅವರ ಕುಟುಂಬದವರಿಗೆ ಪರಿಹಾರ ಒದಗಿಸುವ ಬಗ್ಗೆ ವಿಶೇಷ ಪ್ರಕರಣವಾಗಿ ಪರಿಗಣಿಸುವಂತೆ ಕೋರಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. -ಚಿತ್ರ: ಸುನಿಲ್