ಕೂಡಿಗೆ, ಆ. 21: ರೈತರು ಈ ಬಾರಿ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯನ್ನು ಬೆಳೆಯಲು ತೊಡಗಿರುವುದು ಕಂಡುಬರುತ್ತ್ತಿದೆ. ಆದರೆ ಶುಂಠಿ ಬೇಸಾಯ ಮಾಡಲು ಕಳೆದ ಐದು ತಿಂಗಳುಗಳ ಹಿಂದೆ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ವ್ಯವಸಾಯ ಮಾಡಿ ಈ ಬಾರಿ ಶುಂಠಿ ಬೆಳೆಗೆ ದರ ಕುಸಿದಿದ್ದರಿಂದ ಶುಂಠಿ ಬೆಳೆಗಾರರು ಬಾರಿ ನಷ್ಟ ಅನುಭವಿಸುವಂತ ಪ್ರಸಂಗ ಎದುರಾಗಿದೆ.

ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಕೊಳವೆ ಬಾವಿಗಳಿಂದ ನೀರನ್ನು ಉಪಯೋಗಿಸಿಕೊಂಡು ಹನಿ ನೀರಾವರಿ ಪದ್ಧತಿಯಲ್ಲಿ ಉತ್ತಮವಾದ ಶುಂಠಿ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಕೊರೊನಾ ಸೋಂಕು ಹಿನ್ನೆಲೆ ರಾಜ್ಯದ ಬೇಡಿಕೆ ಇರುವ ಹೊರ ರಾಜ್ಯಗಳಿಗೆ ಸಾಗಾಟವಾಗುತ್ತಿಲ್ಲ. ಇದು ಒಂದು ಕಾರಣವಾದರೆ ಈ ಬಾರಿ ಶುಂಠಿ ಗದ್ದೆಗಳಲ್ಲಿ ಹೊಸದಾಗಿ ಕಾಯಿಲೆ ಬಂದಿರುವುದರಿಂದ ಹೆಚ್ಚು ಶುಂಠಿ ಬೆಳೆಯುವ ಜಮೀನಿನಲ್ಲೇ ಕೊಳೆತು ಹಾಳಾಗುತ್ತಿವೆ. ಇದನ್ನು ಅರಿತ ಅನೇಕ ರೈತರು ಈ ಬೆಳೆಯನ್ನು ಕಿತ್ತು ಭತ್ತದ ನಾಟಿ ಮಾಡಲು ಸಿದ್ಧರಾಗಿದ್ದಾರೆ.