ಮಡಿಕೇರಿ, ಆ.21 : ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರ ಸಾವಿನ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗುತ್ತಿಗೆ, ಹೊರ ಹುತ್ತಿಗೆ ನೌಕರರ ಸಂಘÀ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿತು.

ಸಿಬ್ಬಂದಿಗಳು ಘಟನೆಯನ್ನು ಖಂಡಿಸಿ ತುರ್ತು ಸೇವೆಯನ್ನು ಹೊರತುಪಡಿಸಿ ವೈದ್ಯಕೀಯ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಿದರು. ಕಪ್ಪುಪಟ್ಟಿಯನ್ನು ಧರಿಸಿ ಮುಷ್ಕರ ನಡೆಸುವ ಮೂಲಕ ಆರೋಗ್ಯಾಧಿಕಾರಿ ಸಾವಿಗೆ ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಮಹದೇವಪ್ಪ ಅವರು ಕಾರ್ಯದ ಒತ್ತಡದಿಂದ ಆರೋಗ್ಯಾಧಿಕಾರಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿದರು.

ಪ್ರಕರಣದ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಿ ನಾಗೇಂದ್ರ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಘು, ಖಜಾಂಚಿ ದಿವಾಕರ್, ಕೆಜಿಎಂ ಪದಾಧಿಕಾರಿಗಳಾದ ಡಾ.ಎನ್.ಆನಂದ್, ಡಾ.ಎಸ್.ಗೋಪಿನಾಥ್ ಹಾಗೂ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

ವೀರಾಜಪೇಟೆಯಲ್ಲಿ ಪ್ರತಿಭಟನೆ

ವೀರಾಜಪೇಟೆ: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಆರ್ ನಾಗೇಂದ್ರ ಅವರು ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದರÀ ವಿರುದ್ಧ ಇಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು ತಮ್ಮ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ. ಅನಿಲ್‍ಧವನ್, ಡಾ. ಶ್ರೀನಿವಾಸ್‍ಮೂರ್ತಿ ಇತರರು ಪಾಲ್ಗೊಂಡಿದ್ದರು. ಪ್ರಕರಣದ ವಿರುದ್ಧ ಸರಕಾರದಿಂದಲೇ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಪ್ರತಿಭಟನೆ ನಿರತ ವೈದ್ಯರು ಸರಕಾರವನ್ನು ಒತ್ತಾಯಿಸಿದರು. ವೈದ್ಯರುಗಳಿಂದ ಪ್ರತಿಭಟನೆ ನಡೆದರೂ ತುರ್ತು ಸೇವೆಗೆ ಅವಕಾಶ ನೀಡಲಾಗಿತ್ತು.