ಸ್ವಚ್ಛ ಸರ್ವೇಕ್ಷಣದಲ್ಲಿ ಮೈಸೂರು ಪ್ರಥಮ
ನವದೆಹಲಿ, ಆ. 20: ಕೇಂದ್ರ ಸರ್ಕಾರ “ಸ್ವಚ್ಛ ಸರ್ವೇಕ್ಷಣ 2020” ಸಮೀಕ್ಷೆಯನ್ನು ಗುರುವಾರ ಪ್ರಕಟಿಸಿದ್ದು, 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮೊದಲ ಸ್ಥಾನ ಪಡೆದಿದೆ. ರಾಜಧಾನಿ ಬೆಂಗಳೂರು ನಗರಕ್ಕೆ ಅತ್ಯುತ್ತಮ ಸ್ವ ಸುಸ್ಥಿರ ನಗರ ಪ್ರಶಸ್ತಿ ದೊರೆತಿದೆ. ಈ ಮೂಲಕ ರಾಜ್ಯಕ್ಕೆ ಎರಡು ಪ್ರಮುಖ ಪ್ರಶಸ್ತಿಗಳು ದೊರೆತಿವೆ. 2018 ರಲ್ಲೂ ಈ ವಿಭಾಗದಲ್ಲಿ ಮೈಸೂರು ಅಗ್ರಸ್ಥಾನದಲ್ಲಿತ್ತು. ಆದರೆ ಸಮಗ್ರ ವಿಭಾಗದಲ್ಲಿ ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ ಐದನೇ ಸ್ಥಾನಕ್ಕೆ ಕುಸಿದಿದೆ. 2015 ಮತ್ತು 2016ರಲ್ಲಿ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಕೀರ್ತಿಗೆ ಭಾಜನವಾಗಿದ್ದ ಮೈಸೂರು ಕಳೆದ ಬಾರಿ ಮೂರನೇ ಸ್ಥಾನದಲ್ಲಿತ್ತು. ಇನ್ನು ಬೆಂಗಳೂರಿಗೆ ಅತ್ಯುತ್ತಮ ಸ್ವ ಸುಸ್ಥಿರ ನಗರ ಪ್ರಶಸ್ತಿ ಲಭಿಸಿದ್ದು 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಆಯ್ದ 47 ನಗರಗಳ ಆಯ್ಕೆ ಮಾಡಿದ್ದು ಅವುಗಳು ಕಸ ವಿಲೇವಾರಿ ಹಾಗೂ ನಿರ್ವಹಣೆಗಾಗಿ ಅಳವಡಿಸಿಕೊಂಡ ಮಾರ್ಗಗಳನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗಿದೆ. 47 ನಗರಗಳ ಪೈಕಿ ಬೆಂಗಳೂರು 37ನೇ ಸ್ಥಾನದಲ್ಲಿದೆ.
ನಷ್ಟ ವಸೂಲಿಗೆ ಕ್ಲೈಮ್ ಕಮಿಷನರ್
ಬೆಂಗಳೂರು, ಆ. 20: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದಲೇ ನಷ್ಟ ವಸೂಲಿ ಮಾಡಬೇಕು ಎಂಬ ಸರ್ಕಾರದ ನಿರ್ಧಾರಕ್ಕೆ ಕ್ಲೈಮ್ ಕಮಿಷನರ್ ನೇಮಕ ಮಾಡುವ ಕುರಿತು ತಾ. 25 ರಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡುವ ಸಾಧ್ಯತೆ ಇದೆ. ಗಲಭೆಯಲ್ಲಿ ಆದ ನಷ್ಟವನ್ನು ವಸೂಲಿ ಮಾಡುವುದಕ್ಕೆ ಹಾಗೂ ಪರಿಹಾರ ನೀಡುವ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಕ್ಲೇಮ್ ಕಮಿಷನರ್ ನೇಮಕ ಮಾಡುವಂತೆ ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿನಗಿ ಅವರು ಅರ್ಜಿಯ ವಿಚಾರಣೆಯನ್ನು ತಾ. 25ಕ್ಕೆ ಮುಂದೂಡಿದ್ದಾರೆ. ಅಲ್ಲದೆ ಇದೇ ವಿಚಾರವಾಗಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ಅಂಶಗಳನ್ನು ಗುರುತಿಸಿ ಅವುಗಳ ವಿಚಾರಣೆಯನ್ನೂ ಅಂದೇ ನಡೆಸಲು ಕ್ರಮ ಕೈಗೊಳ್ಳಿ ಎಂದೂ ಸೂಚಿಸಿದೆ.
ಭೂಕಾಯ್ದೆ ಬಗ್ಗೆ ಕೋರ್ಟ್ ನೋಟೀಸ್
ಬೆಂಗಳೂರು, ಆ. 20: ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ಕುರಿತು ಸುಗ್ರೀವಾಜ್ಞೆ ಹೊರಡಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಬಾಗಲಕೋಟೆ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ನಾಗರಾಜ್ಹೊಂಗಲ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ನ್ಯಾಯಪೀಠ, ಸರ್ಕಾರಕ್ಕೆ ತನ್ನ ನಿಲುವು ತಿಳಿಸುವಂತೆ ಸೂಚನೆ ನೀಡಿದೆ.
ಸೆ. 21 ರಿಂದ 30 ರವರೆಗೆ ಅಧಿವೇಶನ
ಬೆಂಗಳೂರು, ಆ. 20: ಕೊರೊನಾ ಸಂಕಷ್ಟದ ನಡುವೆಯೂ ರಾಜ್ಯ ವಿಧಾನಮಂಡಲ ಅಧಿವೇಶನ ಕರೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸೆ. 21 ರಿಂದ 30 ರವರೆಗೆ ಅಧಿವೇಶನ ನಡೆಸಲು ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ವಿಧಾನಸಭಾ ಸ್ಪೀಕರ್ ಹಾಗೂ ವಿಧಾನಪರಿಷತ್ ಸಭಾಪತಿ ಅವರಿಗೆ ಸಂಪುಟ ಮನವಿ ಮಾಡಿದೆ. ಕೊರೊನಾ ಮಹಾಮಾರಿಯಿಂದಾಗಿ ಕಳೆದ ಬಾರಿ ಬೇಸಿಗೆ ಅಧಿವೇಶನವನ್ನು ರಾಜ್ಯದಲ್ಲಿ ಮುಂದೂಡಲಾಗಿತ್ತು. ಈ ವೇಳೆ ಸುಗ್ರೀವಾಜ್ಞೆ ಮೂಲಕ ಬಿ.ಎಸ್. ಯಡಿಯೂರಪ್ಪ ಸರ್ಕಾರ ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಯನ್ನು ಅಂಗೀಕಾರ ಪಡೆದಿತ್ತು.
4 ದಿನಗಳಲ್ಲಿ 6 ಉಗ್ರರ ಹತ್ಯೆ
ಕುಪ್ವಾರ, ಆ. 20: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ನಾಲ್ಕು ದಿನಗಳ ಅಂತರದಲ್ಲಿ ಮೋಸ್ಟ್ ವಾಂಟೆಡ್ ಉಗ್ರರೂ ಸೇರಿದಂತೆ ಒಟ್ಟು 6 ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಬಾರಾಮುಲ್ಲ ಮತ್ತು ಕುಪ್ವಾರ ಎನ್ ಕೌಂಟರ್ಗೆ ಸಂಬಂಧಿಸಿದಂತೆ ಎಂದು ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಲ್ಲಿ ಕಾಶ್ಮೀರದಲ್ಲಿ ಮೋಸ್ಟ್ ವಾಟೆಂಡ್ ಉಗ್ರರ ಹೆಡೆಮುರಿ ಕಟ್ಟಲಾಗಿದ್ದು, ಈ ಪೈಕಿ 4 ಮಂದಿ ಉಗ್ರರು ಸೇನೆಯ ಟಾಪ್ 10 ಲಿಸ್ಟ್ನಲ್ಲಿದ್ದರು ಎಂದು ಹೇಳಿದ್ದಾರೆ. ಕುಪ್ವಾರ, ಬಾರಾಮುಲ್ಲಾ ಮತ್ತು ಕ್ರೀರಿ ಸೇರಿದಂತೆ ಒಟ್ಟು ಮೂರು ಕಾರ್ಯಾಚರಣೆ ನಡೆಸಲಾಗಿದ್ದು, ಸಜ್ಜದ್ ಹೈದರ್ ನಂತಹ ಉಗ್ರ ಸಂಘಟನೆಯ ಟಾಪ್ ಕಮಾಂಡರ್ನ ಹತ್ಯೆಯಾಗಿದೆ. ಇದಲ್ಲದೆ ಈತನ ಪಾಕಿಸ್ತಾನಿ ಉಗ್ರ ಕಮಾಂಡರ್ ಉಸ್ಮಾನ್ ಮತ್ತು ಅನಾಯತುಲ್ಲಾ ನನ್ನು ಹತ್ಯೆ ಮಾಡಲಾಗಿದೆ. ಅಂತೆಯೇ ಇದೇ ಪ್ರದೇಶದಲ್ಲಿದ್ದ ಇತರ ಉಗ್ರ ಸಂಘಟನೆಗಳ ಉಗ್ರರಾದ ನಾಸಿರುದ್ದೀನ್ ಅಲಿಯಾಸ್ ಅಬುಸಾದ್ನನ್ನು ಕೂಡ ಸೇನೆ ಹೊಡೆದುರುಳಿಸಿದೆ. ಸೇನೆ ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ಪ್ರಮುಖ ಉಗ್ರಗಾಮಿಗಳ ಹೆಡೆಮುರಿ ಕಟ್ಟಲಾಗಿದೆ. ಈ ಪೈಕಿ ಸೇನೆಯಿಂದ ಹತ್ಯೆಯಾದ ಅಬುಸಾದ್ಗೆ ಉತ್ತರ ಕಾಶ್ಮೀರ ಉಗ್ರ ಸಂಘಟನೆಯ ಹೊಣೆಗಾರಿಕೆ ನೀಡಲಾಗಿತ್ತು.
ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ
ಬೆಂಗಳೂರು, ಆ. 20: ರಾಜ್ಯದ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕುರಿತಾದ ವಸತಿ ಇಲಾಖೆಯ ಮಹತ್ವದ ಪ್ರಸ್ತಾವನೆಗೆ ಈ ದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಸೇರಿದಂತೆ ರಾಜ್ಯದ ವಿವಿಧ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಮಾಲೀಕತ್ವದಲ್ಲಿರುವ ಸುಮಾರು 6745 ಎಕರೆ ಜಮೀನಿನಲ್ಲಿ ಸ್ಥಿತಗೊಂಡಿರುವ 1873 ಕೊಳಚೆ ಪ್ರದೇಶಗಳ ಸುಮಾರು 3.13 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಪ್ರಸ್ತಾವನೆ ಇದಾಗಿದ್ದು, ರಾಜ್ಯದ ಸುಮಾರು 16 ಲಕ್ಷ ಕೊಳಗೇರಿ ನಿವಾಸಿಗಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ. ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲೇ ಸುಮಾರು 683 ಎಕರೆ ಸರ್ಕಾರಿ ಜಾಗದಲ್ಲಿ 239 ಕೊಳಚೆ ಪ್ರದೇಶಗಳಿದ್ದು, ಸುಮಾರು 50,000 ಕುಟುಂಬಗಳು ವಾಸಿಸುತ್ತಿವೆ. ಕೊಳಗೇರಿ ನಿವಾಸಿಗಳು ತಮ್ಮ ವಾಸಸ್ಥಳದ ಹಕ್ಕಿನಿಂದ ಹಲವಾರು ವರ್ಷಗಳಿಂದ ವಂಚಿತರಾಗಿರುವುದನ್ನು ಮನಗಂಡು ಇವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಧೃಡರನ್ನಾಗಿಸಿ, ಸಮಾಜದ ಮುಖ್ಯವಾಹಿನಿಗೆ ತಂದು ಉತ್ತಮ ನಾಗರಿಕರಾಗಿ ಬದುಕಲು ಅವಕಾಶ ನೀಡುವ ಸದುದ್ದೇಶದಿಂದ ವಸತಿ, ನಗರಾಭಿವೃದ್ಧಿ, ಪೌರಾಡಳಿತ ಹಾಗೂ ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳೊಂದಿಗೆ ನಿರಂತರ ಚರ್ಚಿಸಿ, ಸಭೆ ನಡೆಸಿ ಈ ಪ್ರಸ್ತಾವನೆಗೆ ಒಂದು ತಾರ್ಕಿಕ ಅಂತ್ಯ ನೀಡಿರುವುದಕ್ಕೆ ತಮಗೆ ವೈಯುಕ್ತಿಕವಾಗಿ ಸಂತೋಷವಿದೆ ಎಂದು ತಿಳಿಸಿದ ಸಚಿವರು ಇದಕ್ಕಾಗಿ ಶ್ರಮಿಸಿದ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಸಚಿವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕೊಳಗೇರಿಯಲ್ಲಿ ವಾಸ ಮಾಡುವ ಎಲ್ಲಾ ಜನರು ಸರ್ಕಾರದ ಈ ಮಹತ್ವದ ನಿರ್ಧಾರದಿಂದಾದ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರಾಗಿ ಸಮಾಜದ ಮುಖ್ಯವಾಹಿನಿಗೆ ಬರಲಿ ಎಂದೂ ಇದೇ ಸಂದರ್ಭದಲ್ಲಿ ಆಶಿಸಿದ್ದಾರೆ.