ಮಡಿಕೇರಿ, ಆ. 20: ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ತಿರುವುಗಳು ಕಂಡುಬರುತ್ತಿದೆ. ಈ ಕುರಿತಾಗಿ ತನಿಖೆ ನಡೆಸುತ್ತಿರುವ ಉಗ್ರನಿಗ್ರಹ ಪಡೆ (ಎಟಿಎಸ್) ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಶಂಕಿತ ಉಗ್ರ ಎಂದು ಹೇಳಲಾಗಿರುವ ಸಮಿಯುದ್ದೀನ್ ಎಂಬಾತ ಬಂಧಿತನಾಗಿದ್ದು, ಈತನ ಕುರಿತಾಗಿ ವಿವರ - ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.ಬಂಧಿತನಾಗಿರುವ ಸಮಿಯುದ್ದೀನ್ ಕೊಡಗು ಮೂಲದವನು ಎಂಬದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಈತನ ಮೂಲ, ಮತ್ತಿತರ ವಿವರಗಳ ಕುರಿತಾಗಿಯೂ ತನಿಖೆ ಆರಂಭ ಗೊಂಡಿದ್ದು, ಕೊಡಗಿನ ಹೆಸರು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆ ಯಲ್ಲಿಯೂ ಕೌತುಕ ಸೃಷ್ಟಿಯಾಗಿದೆ. ಗಲಭೆ ಪ್ರಕರಣದಲ್ಲಿ ವಿದೇಶಿ ಹಣ ಹರಿದಾಡಿರುವ ಅನುಮಾನ ಮೂಡಿದ್ದು, ಹಲವಾರು ಆಯಾಮ ಗಳಲ್ಲಿ ತನಿಖೆ ನಡೆಯುತ್ತಿರುವ ಕುರಿತು ಹೇಳ ಲಾಗುತ್ತಿದೆ. ಸಮಿಯುದ್ದೀನ್ ಹಲವು ವರ್ಷಗಳ ಹಿಂದೆ ಕೊಡಗಿನಲ್ಲಿ ನೆಲೆಸಿದ್ದ ಮಾಹಿತಿಯಿದೆ. ಈತ ವೀರಾಜಪೇಟೆಯವನು ಎಂಬ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಎಟಿಎಸ್ ಮಾತ್ರವಲ್ಲದೆ, ಜಿಲ್ಲಾ ಪೊಲೀಸರು ಜಾಡು ಅರಸುತ್ತಿದ್ದಾರೆ.

ಕೆಲವು ವರ್ಷಗಳಿಂದ ಈತ ಬೆಂಗಳೂರಿನಲ್ಲೇ ನೆಲೆಸಿದ್ದಾನೆ ಎನ್ನುವ ಮಾಹಿತಿಯಿದ್ದರೂ ಬಂಧಿತ ವ್ಯಕ್ತಿ ಸಾಕಷ್ಟು ಆಸ್ತಿ ಹೊಂದಿರುವ ಸಂಶಯ ದಂತೆ ತನಿಖೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪತ್ನಿ ಹೆಸರಲ್ಲಿ ಎನ್‍ಜಿಓ

ಪ್ರಸ್ತುತ ಬಂಧಿತನಾಗಿರುವ ಸಮಿಯುದ್ದೀನ್ ತನ್ನ ಪತ್ನಿಯ ಹೆಸರಿನಲ್ಲಿ ಎನ್‍ಜಿಓ ಅನ್ನು (ಸರಕಾರೇತರ ಸಂಸ್ಥೆ) ನಡೆಸುತ್ತಿದ್ದು, ಈ ಟ್ರಸ್ಟ್‍ನ ಮೂಲಕ ಕೆಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ. ಈ ಕಾರ್ಯಕ್ರಮ ಗಳನ್ನು ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸುತ್ತಿದ್ದನೆನ್ನಲಾಗಿದ್ದು, ಇದಕ್ಕೆ ಉದ್ಯಮಿಗಳು, ರಾಜಕಾರಣಿ ಗಳನ್ನು ಆಹ್ವಾನಿಸುತ್ತಿದ್ದ. ಬಳಿಕ ಇದನ್ನು ಸೋಷಿಯಲ್ ಮೀಡಿಯಾ ಮೂಲಕ ಪ್ರಚಾರ ಮಾಡುತ್ತಿದ್ದು, ಇದಕ್ಕೆ ಸಾಕಷ್ಟು ಹಣ ಹರಿದು ಬರುತ್ತಿತ್ತೆನ್ನಲಾಗಿದೆ.

ಕೆಲವಾರು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಸಂಘಟನೆಗಳು - ವ್ಯಕ್ತಿಗಳೊಂದಿಗೂ ಈತನಿಗೆ ಸಂಪರ್ಕವಿತ್ತೆಂಬ ಮಾಹಿತಿಯನ್ನೂ ತನಿಖಾ ತಂಡ ಕಲೆ ಹಾಕಿದೆ. ಈ ಹಿಂದೆ ಶಿವಾಜಿನಗರದಲ್ಲಿ ನಡೆದಿದ್ದ ಆರ್‍ಎಸ್‍ಎಸ್‍ನ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಈತ ಜೈಲಿನಲ್ಲಿ ಭೇಟಿ ಮಾಡಿದ್ದಾಗಿಯೂ ಹೇಳಲಾಗಿದೆ. ಈತ ಕಾರ್ಯದರ್ಶಿ ಹಾಗೂ ಪತ್ನಿ ಅಧ್ಯಕ್ಷೆಯಾಗಿರುವ ಟ್ರಸ್ಟ್‍ಗೆ ಹರಿದು ಬಂದಿರುವ ಹಣ ಡಿಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಗೆ ಬಳಕೆಯಾಗಿದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.

ಬಂಧಿತ ಆರೋಪಿ ಕೊಡಗಿನ ಮೂಲದವನಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈತನ ಆಸ್ತಿ ಅಥವಾ ಮತ್ತಿತರ ಯಾವದೇ ಸಂಪರ್ಕಗಳು ಇದೆಯೇ ಎಂಬ ಬಗ್ಗೆ ಉಗ್ರ ನಿಗ್ರಹ ದಳ (ಎಟಿಎಸ್) ಜಿಲ್ಲೆಯಲ್ಲಿಯೂ ಕಾರ್ಯಾಚರಿಸುತ್ತಿರುವದಾಗಿ ಹೇಳಲಾಗುತ್ತಿದ್ದು, ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.