ಗೋಣಿಕೊಪ್ಪಲು, ಆ.20: ಹರಿಯುತ್ತಿರುವ ನಾಲೆಗೆ ಟ್ಯಾಂಕರ್ ಮೂಲಕ ಮಲಮೂತ್ರ ತುಂಬಿ ತಂದು ನಾಲೆಗೆ ಸುರಿದ ಸುದ್ದಿ ತಿಳಿದ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷರಾದ ರೂಪಭೀಮಯ್ಯ ಹಾಗೂ ಗ್ರಾಮಸ್ಥರು ಟ್ಯಾಂಕರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡರು ಪಂಚಾಯ್ತಿ ವತಿಯಿಂದ ರೂ. 8 ಸಾವಿರ ದಂಡವನ್ನು ವಿಧಿಸಲಾಯಿತು.
ಆಂದ್ರ, ಕರ್ನಾಟಕ ಗಡಿಭಾಗ ಚಿಂತಾಮಣಿಯಿಂದ ಗೋಣಿಕೊಪ್ಪಲುವಿಗೆ ಬಂದಿದ್ದ ಎಪಿ20 ಡಬ್ಲ್ಯೂ9579 ಮಿನಿ ಟ್ಯಾಂಕರ್‍ನಲ್ಲಿ ಮಲಮೂತ್ರ ತುಂಬಿಸಿಕೊಂಡು ತಂದು ಗೋಣಿಕೊಪ್ಪ ವೀರಾಜಪೇಟೆ ಮುಖ್ಯ ರಸ್ತೆಯ ಹಾತೂರು ನಾಲೆಗೆ ಸುರಿಯಲಾಗಿತ್ತು. ಈ ವಿಷಯವನ್ನು ಗ್ರಾಮಸ್ಥರೋರ್ವರು ಕೊಕ್ಕಂಡ ರೂಪಭೀಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಅವರು ಚಾಲಕನನ್ನು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಚಾಲಕನನ್ನು ಪ್ರಶ್ನಿಸಿದಾಗ ಮಾಡಿದ ತಪ್ಪನ್ನು ಒಪ್ಪಿಕೊಂಡು ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾನೆ. ಮಾಡಿದ ತಪ್ಪಿಗೆ ಈತನಿಂದ ದಂಡದ ರೂಪದಲ್ಲಿ ಪಂಚಾಯ್ತಿಗೆ ರೂ. 8 ಸಾವಿರ ಕಟ್ಟಿಸಲಾಗಿದೆ. ನಂತರ ವಾಹನವನ್ನು ಬಿಡುಗಡೆ ಮಾಡಲಾಗಿದೆ. ಗ್ರಾಮಸ್ಥರಾದ ಕೊಕ್ಕಂಡ ಗಿಣಿಗಣಪತಿ, ಚೇಂದಂಡ ರಾಜ, ಬಿಲ್ ಕಲೆಕ್ಟರ್ ಜೀವನ್ ಸೇರಿದಂತೆ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.