ವರದಿ-ಚಂದ್ರಮೋಹನ್

ಕುಶಾಲನಗರ, ಆ. 20: ಜಿಲ್ಲೆಯ ಜನತೆಯಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮೈಸೂರು-ಕುಶಾಲನಗರ ರೈಲ್ವೇ ಮಾರ್ಗದ ಕನಸು ಇದೀಗ ಮತ್ತೆ ನನಸಾಗುವಂತಿದೆ. 2021 ರ ಮಾರ್ಚ್ ಒಳಗೆ ಮೈಸೂರು ಕುಶಾಲನಗರ ನಡುವೆ ರೈಲ್ವೇ ಹಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂತಿಮ ಹಂತದ ಸರ್ವೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನೈಋತ್ಯ ರೈಲ್ವೇ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಮಾಹಿತಿ ನೀಡಿದ್ದಾರೆ.

ಬುಧವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದ್ದು ರೈಲ್ವೇ ಹಳಿ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ಹಸಿರು ನಿಶಾನೆ ದೊರೆತ ಹಿನ್ನೆಲೆಯಲ್ಲಿ ಅಂತಿಮ ಸರ್ವೆ ಕಾರ್ಯ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿಗೆ ಟೆಂಡರ್ ಕರೆದು ಕೇಂದ್ರದಿಂದ ಅನುದಾನ ಬಿಡುಗಡೆಯಾದ ಬೆನ್ನಲ್ಲೇ ಹಳಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ಒದಗಿಸಿದ್ದಾರೆ.

ಅಂದಾಜು 100 ಕಿಮೀ ಅಂತರದ ಈ ಮಾರ್ಗಕ್ಕೆ ಕಳೆದ 6 ವರ್ಷಗಳಿಂದ ಹಲವು ತೊಡಕುಗಳು ಬರುತ್ತಿದ್ದು ಈ ಯೋಜನೆಯನ್ನು ರೈಲ್ವೆ ಇಲಾಖೆ ಕೈಬಿಟ್ಟಂತೆ ಕಂಡುಬಂದಿತ್ತು.

ಈ ಹೊಸ ರೈಲು ಮಾರ್ಗ ಯೋಜನೆ ಸಂಬಂಧ 2011 ರಲ್ಲಿ ರೈಲ್ವೇ ಇಲಾಖೆ ಪ್ರಾರಂಭಿಕ ಸರ್ವೆ ಕಾರ್ಯ ಕೈಗೊಂಡಿತ್ತು. ಮೈಸೂರು-ಕುಶಾಲನಗರ ರೈಲ್ವೇ ಯೋಜನೆಗೆ 600 ಕೋಟಿ ರೂ ವೆಚ್ಚವಾಗುವ ಬಗ್ಗೆ ಅಂದಾಜು ಪಟ್ಟಿ ಕೂಡ ಸಲ್ಲಿಸಲಾಗಿತ್ತು. 2012 ರಲ್ಲಿ ಅಂದಿನ ರೈಲ್ವೇ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ರೈಲು ಮಾರ್ಗ ಶ್ರೀರಂಗಪಟ್ಟಣದ ಬೆಳಗೋಳದಿಂದ ಹುಣಸೂರು, ಪಿರಿಯಾಪಟ್ಟಣ, ಬೈಲುಕೊಪ್ಪ, ಆವರ್ತಿ ಮಾರ್ಗವಾಗಿ ಮುತ್ತಿನ ಮುಳ್ಳುಸೋಗೆ ಮೂಲಕ ಕೊಡಗು ಜಿಲ್ಲೆಯ ಗಡಿ ಭಾಗ ಕುಶಾಲನಗರ ಕೈಗಾರಿಕಾ ಬಡಾವಣೆಗೆ ಸಂಪರ್ಕ ಕಲ್ಪಿಸಲಿದೆ.

1981 ರಲ್ಲಿಯೇ ಮೈಸೂರಿನಿಂದ ಜಿಲ್ಲೆಗೆ ರೈಲು ಮಾರ್ಗ ನಿರ್ಮಾಣದ ಬಗ್ಗೆ ಯೋಜನೆಯ ಪ್ರಸ್ತಾವನೆಯಾಗಿತ್ತು. ಆದರೆ ಹಲವು ಕಾರಣಾಂತರಗಳಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಕೊಡಗು ಜಿಲ್ಲೆಯ ಏಕೈಕ ಕೈಗಾರಿಕಾ ಬಡಾವಣೆಯೆಂಬ ಹೆಗ್ಗಳಿಕೆಯಲ್ಲಿರುವ ಕುಶಾಲನಗರ ತನಕ ರೈಲ್ವೇ ಮಾರ್ಗ ಬಂದಲ್ಲಿ ಕಾಫಿ ಉದ್ದಿಮೆಗೆ ನೆರವಾಗುವ ಸಾಧ್ಯತೆ ಅಧಿಕವಾಗಿದೆ ಎನ್ನುವುದು ಈ ಭಾಗದ ಉದ್ಯಮಿಗಳ ಅಭಿಪ್ರಾಯವಾಗಿದೆ.

ಕನಿಷ್ಟ ಕುಶಾಲನಗರದ ತನಕ ರೈಲ್ವೇ ಸಂಪರ್ಕ ಬಂದಲ್ಲಿ ಜಿಲ್ಲೆಯ ವ್ಯಾಪಾರ ವಹಿವಾಟು ಹಾಗೂ ಕೈಗಾರಿಕಾ ಉದ್ಯಮಗಳು ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎನ್ನುತ್ತಾರೆ ಛೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಬಿ. ಅಮೃತ್‍ರಾಜ್.

ಇನ್ನೊಂದೆಡೆ ನೆರೆಯ ಟಿಬೇಟಿಯನ್ ನಾಗರಿಕರು, ಜಿಲ್ಲೆಯಲ್ಲಿ ನೆಲೆ ನಿಂತಿರುವ ಹೊರ ರಾಜ್ಯಗಳ ವ್ಯಾಪಾರಸ್ಥರು ಹಾಗೂ ಕಾರ್ಮಿಕರು ಮೈಸೂರು-ಕುಶಾಲನಗರ ರೈಲ್ವೇ ಸಂಪರ್ಕದ ಬಗ್ಗೆ ಎದುರು ನೋಡುತ್ತಿರುವುದು ಕಾಣಬಹುದಾಗಿದೆ.

ಈ ನಡುವೆ ಬೆಂಗಳೂರು ಮತ್ತು ಕೇರಳ ರಾಜ್ಯದ ಪಟ್ಟಣಗಳ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೇ ಯೋಜನೆಯೊಂದು ಕೂಡ ಕಳೆದ ಬಜೆಟ್‍ನಲ್ಲಿ ಪ್ರಸ್ತಾವನೆಗೊಂಡಿದೆ. ಅದರಲ್ಲಿ ಮೈಸೂರು-ತಲಚೇರಿ ರೈಲ್ವೇ ಯೋಜನೆ ಕೇರಳ ಸರಕಾರದ ಆಸಕ್ತಿಯಿಂದ ಚಿಗುರೊಡೆದಿರುವುದು ಇಲ್ಲಿ ಗಮನಾರ್ಹ.

ರೈಲ್ವೇ ಭೂಪಟದಲ್ಲಿ ಹಳಿ ಇಲ್ಲದ ಜಿಲ್ಲೆ ಎನ್ನುವ ಖ್ಯಾತಿಗೆ ಒಳಗಾಗಿರುವ ಕೊಡಗು ಜಿಲ್ಲೆಗೆ ಇದೀಗ ಕೆಲವೇ ವರ್ಷಗಳಲ್ಲಿ ರೈಲು ಬರುವುದಂತೂ ಖಚಿತವಾದಂತಿದೆ.