ಕಣಿವೆ, ಆ. 20: ಕೊರೊನಾ ದಿಂದಾಗಿ ಮನೆಯಲ್ಲೇ ಕುಳಿತಿರುವ ಮಕ್ಕಳು ಇದೀಗ ಮನೆಯಂಗಳದಲ್ಲಿ ಆಟವಾಡುತ್ತಾ, ಆಟದ ಜೊತೆಗೆ ಒಂದಷ್ಟು ಸಮಯ ಪಾಠವನ್ನು ಕಲಿಯುತ್ತಾ ಹಾಯಾಗಿದ್ದ ಚಿತ್ರಣ ಕಣಿವೆ ಬಳಿಯ ಹುಲುಸೆ ಗ್ರಾಮದಲ್ಲಿ ಕಂಡು ಬಂತು. ಅಕ್ಷರವಂತ ಗೃಹಿಣಿಯೊಬ್ಬರು ತಮ್ಮ ಮಕ್ಕಳ ಜೊತೆಗೆ ಪಕ್ಕದ ಮನೆಯ ಮಕ್ಕಳಿಗೂ ಪಾಠವನ್ನು ಹೇಳಿ ಕೊಡುವ ಮೂಲಕ ಮಮಕಾರವನ್ನು ಮೆರೆಯು ತ್ತಿದ್ದಾರೆ ಇಲ್ಲಿನ ಗೃಹಿಣಿ ಮಮತಾ.

ವಿದ್ಯಾಗಮ ಎಂಬ ಶಿಕ್ಷಣ ಇಲಾಖೆಯ ಹೊಸ ಪರಿಕಲ್ಪನೆಯಡಿ ಮಕ್ಕಳಿರುವಲ್ಲಿಗೆ ತೆರಳಿ ಪಾಠವನ್ನು ಕಲಿಸಿಕೊಡುವತ್ತ ಕೆಲವು ಶಿಕ್ಷಕರು ಮುಂದಾದರೆ, ಕೆಲವರು ಕೊರೊನಾಕ್ಕೆ ಹೆದರದೇ ಶಾಲೆಗಳಿಗೆ ಬಂದು, ಕೊಠಡಿಯ ಬಾಗಿಲು ತೆರೆದು, ಮಕ್ಕಳನ್ನು ಕರೆದು ಪಾಠ ಕಲಿಸಿ ಕೊಡುವ ಸಾಹಸ ತೋರುತ್ತಿದ್ದಾರೆ. ಆದರೆ ಗುಂಪು ಇರುವೆಡೆ ಮಕ್ಕಳು ಇದ್ದರೆ ಅದ್ಯಾವ ಗ್ರಹಚಾರವೋ? ಬೇಡವೇ ಬೇಡ. ಈ ಕೊರೊನಾ ಹೋಗೋವರೆಗೂ ನಮ್ಮ ಮಕ್ಕಳು ಪಾಠ ಕಲಿಯದಿದ್ದರೆ ಪರವಾಗಿಲ್ಲ ಅಂದುಕೊಂಡು ಶಾಲೆಗೆ ಕೆಲವರು ಮಕ್ಕಳನ್ನು ಕಳುಹಿಸುತ್ತಿಲ್ಲ. ಹಾಗಾಗಿ ಓದು ಬರಹ ಬಲ್ಲಂತಹ, ಆ ಮನೆಯಲ್ಲಿ ಮಕ್ಕಳೂ ಇರುವಂತಹ ಗೃಹಿಣಿಯರನ್ನು ಕೆಲವು ಪೆÇೀಷಕರು ಹುಡುಕಾಡಿ ಆ ಮನೆಗೆ ಮಕ್ಕಳನ್ನು ಕಲಿಸಲು ಬಿಡುತ್ತಿದ್ದಾರೆ.

ಮಕ್ಕಳು ರಜೆಯಿಂದಾಗಿ ಕಲಿತದ್ದನ್ನು ಮರೆಯದಿರಲೆಂದು ಹೀಗೆ ಪ್ರಯತ್ನಿಸುತ್ತಿದ್ದಾರೆ. ಇನ್ನು ಕೆಲವು ಖಾಸಗಿ ಶಾಲೆಗಳು ಆನ್‍ಲೈನ್ ತರಗತಿ ಹೆಸರಲ್ಲಿ ಮಕ್ಕಳ ಪೆÇೀಷಕರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಹೇಗೆಂದರೆ ಇತ್ತ ಶಾಲೆಗೆ ಬಂದು ಪುಸ್ತಕದ ಫೀಜು ಅದು ಇದು ಎಂದು ಕೊಂಡು ಒಂದಷ್ಟು ಹಣ ಕಟ್ಟಿಸಿಕೊಳ್ಳುವುದು ಒಂದೆಡೆಯಾದರೆ, ಮಕ್ಕಳಿಗೆ ಕಡ್ಡಾಯವಾಗಿ ಟಚ್ ಸ್ಕ್ರೀನ್ ಮೊಬೈಲ್ ತೆಗೆದುಕೊಡಲೇಬೇಕೆಂದು ತಾಕೀತು ಮಾಡುವ ಮೂಲಕವೂ ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎನ್ನಲಾಗಿದೆ.

ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದು ಹೇಳುತ್ತಿದ್ದ ಶಿಕ್ಷಕರೇ ಮಕ್ಕಳಿಗೆ ಮೊಬೈಲ್ ಕೊಡಿಸಿ ಎಂದು ಹೇಳುವ ಕಾಲ ಬಂದು ಬಿಟ್ಟಿದೆ. ಅತ್ತ ಉನ್ನತ ವ್ಯಾಸಂಗ ಮಾಡಿಕೊಂಡು ಉದ್ಯೋಗವನ್ನು ಅರಸುತ್ತಾ ಮನೆಯಲ್ಲೇ ಕುಳಿತ ವಿದ್ಯಾವಂತ ನಿರುದ್ಯೋಗಿಗಳನ್ನು ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಡಿಮೆ ವೇತನಕ್ಕೆ ದುಡಿಸಿಕೊಳ್ಳುತ್ತಿದ್ದವರು ಕೊರೊನಾ ಕಾರಣದಿಂದ ಆ ಮಂದಿಗೆ ವೇತನ ವನ್ನು ಕೂಡ ನೀಡದೆ ಸತಾಯಿಸುತ್ತಿ ರುವ ಬೆಳವಣಿಗೆಗಳು ನಡೆಯುತ್ತಿವೆ. ನಡೆದಿವೆ.

ಇತ್ತ ಈ ಶಿಕ್ಷಕರು ವೇತನಕ್ಕಾಗಿ ಒತ್ತಡವನ್ನು ಹಾಕುವಂತಿಲ್ಲ. ಒತ್ತಡ ಹಾಕಿದರೆ ಮನೆಗೆ ಕಳುಹಿಸುವ ಭಯ. ಅತ್ತ ವೇತನವಿಲ್ಲದೇ ಸುಮ್ಮನೆಯೂ ಇರಲಾಗುತ್ತಿಲ್ಲ. ಏಕೆಂದರೆ ಎಲ್ಲರ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದೆ. ಒಟ್ಟಾರೆ ಕೊರೊನಾ ಎಲ್ಲರ ನೆಮ್ಮದಿಯನ್ನು ಕಸಿದಿರುವುದರಿಂದ ಖಾಸಗಿ ಶಾಲೆ, ಕಾಲೇಜು, ವ್ಯಾಪಾರ ವಹಿವಾಟು, ಪ್ರವಾಸೋದ್ಯಮ ಹೀಗೆ ಎಲ್ಲವುಗಳ ಅವಲಂಭಿತರನ್ನು ಕುಸಿಯುವಂತೆ ಮಾಡಿದೆ. -ಮೂರ್ತಿ