ಮಡಿಕೇರಿ, ಆ. 20: ದಕ್ಷಿಣ ಕೊಡಗಿನ ಬಿರುನಾಣಿಯಲ್ಲಿ ಕಳೆದ ಮಾರ್ಚ್ನಲ್ಲಿ ರಸ್ತೆ ಬದಿ ನಿರ್ಮಿಸಿರುವ ಬೃಹತ್ ತಡೆಗೋಡೆಯೊಂದು, ಕಳಪೆ ಕಾಮಗಾರಿಯಿಂದ ಪ್ರಸಕ್ತ ಮಳೆಯ ನಡುವೆ ಕುಸಿದು ನಾಟಿಗದ್ದೆಗೆ ಹಾನಿ ಉಂಟಾಗಿದೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಖುದ್ದು ಪರಿಶೀಲನೆ ನಡೆಸಿದರು. ಅಲ್ಲದೆ ಸಂಬಂಧಿಸಿದ ಇಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಡೆಗೋಡೆ ಪುನರ್ನಿರ್ಮಾಣದೊಂದಿಗೆ, ಗದ್ದೆ ಹಾನಿಯಾಗಿರುವ ಬಗ್ಗೆ ಅಗತ್ಯ ಕ್ರಮಕ್ಕೆ ನಿರ್ದೇಶಿಸಿದರು.(ಮೊದಲ ಪುಟದಿಂದ) ಅಲ್ಲದೆ, ಟಿ. ಶೆಟ್ಟಿಗೇರಿ ಹೆದ್ದಾರಿಯ ಬದಿಯಲ್ಲಿ ಈಚೆಗೆ ನಿರ್ಮಿಸಿರುವ ಪೋಕೊಳ ತೋಡುವಿನ ಚರಂಡಿಯ ರಕ್ಷಾ ಗೋಡೆ ಕುಸಿದು ಹಾನಿ ಆಗಿರುವ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಅವರನ್ನು ಸಂಪರ್ಕಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸುನಿಲ್ ಸುಬ್ರಮಣಿ ಗಮನ ಸೆಳೆದರು.
ಮೇಲ್ಮನೆ ಸದಸ್ಯರ ಭೇಟಿ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಬಿಜೆಪಿ ಪ್ರಮುಖರಾದ ಅರುಣ್ ಭೀಮಯ್ಯ, ಬಿ.ಕೆ. ಅರುಣ್ಕುಮಾರ್, ಚೆಪ್ಪುಡಿರ ಮಾಚಯ್ಯ, ಬೊಟ್ಟಂಗಡ ರಾಜು, ಬೋಪಣ್ಣ, ಗಿರಿ, ಕವನ್ ಮೊದಲಾದವರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಇಂದು ಬಿರುನಾಣಿ ಬಿಜೆಪಿ ಶಕ್ತಿ ಕೇಂದ್ರದ ಸಭೆ ನಡೆಸುವದರೊಂದಿಗೆ, ಕೊರೊನಾ ಹಾಗೂ ಮಳೆ - ಗಾಳಿಯ ಸಮಸ್ಯೆಯಿಂದಾಗಿ ಗ್ರಾಮೀಣ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿದರು. ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಸಂಸದರೊಂದಿಗೆ ಸರಕಾರದ ಗಮನ ಸೆಳೆದು ಸಮಸ್ಯೆ ನಿವಾರಿಸುವ ಭರವಸೆ ನೀಡಿದರು.