ಮಡಿಕೇರಿ, ಆ. 20: ದಕ್ಷಿಣಕೊಡಗಿನ ಪೊನ್ನಂಪೇಟೆ ಹೋಬಳಿಯ ಧನುಗಾಲ ಗ್ರಾಮದಲ್ಲಿನ ತೋಟವೊಂದರಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೀರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳದವರು ಈ ಕಾರ್ಯಾಚರಣೆ ನಡೆಸಿದ್ದು, ಬಳಿಕ ಪ್ರಕರಣವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ.ವಿಶೇಷವೆಂದರೆ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಮದ್ರೀರ ಉತ್ತಪ್ಪ ಅವರ ತೋಟದಲ್ಲಿ ಈ ಮರ ಕಡಿತಲೆ ಪ್ರಕರಣ ನಡೆದಿದ್ದು, ಅವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. 38 ಹಲಸಿನ ಮರಗಳು ಹಾಗೂ ಒಂದು ಹೊನ್ನೆಮರ ಸೇರಿ 39 ಮರಗಳನ್ನು ಕಡಿಯಲಾಗಿದ್ದು, ಮರದ ನಾಟಾಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತಪ್ಪ ಅವರಿಗೆ ಸೇರಿದ ಕಾಫಿ ತೋಟ ಸರ್ವೆ ನಂ. 78/1 ಹಾಗೂ 73/1ರಲ್ಲಿ

(ಮೊದಲ ಪುಟದಿಂದ) ಈ ಘಟನೆ ನಡೆದಿದೆ. ವೀರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿದಳದವರು ಕಳೆದೆರಡು ದಿನಗಳ ಹಿಂದೆ ದಾಳಿ ನಡೆಸಿ ನಾಟಾಗಳಾಗಿ ಪರಿವರ್ತಿತವಾಗಿದ್ದ ಮರವನ್ನು ವಶಕ್ಕೆ ಪಡೆದು ಮುಂದಿನ ತನಿಖೆಗಾಗಿ ತಿತಿಮತಿಯ ಅರಣ್ಯ ಇಲಾಖೆಗೆ ವರ್ಗಾಯಿಸಿದ್ದಾರೆ.

ಈ ಕುರಿತು ಜಾಗದ ಮಾಲೀಕರನ್ನು ದೂರವಾಣಿ ಮೂಲಕ ವಿಚಾರಿಸಿದ ಸಂದರ್ಭ ತೋಟದಲ್ಲಿ ದಿನಂಪ್ರತಿ ಕಾಡಾನೆಗಳ ಹಾವಳಿ ಅಧಿಕವಾಗಿದೆ. ತೋಟದಲ್ಲಿ ಹಲಸಿನ ಮರಗಳು ಹೆಚ್ಚಿರುವದರಿಂದ ಇದು ಹೆಚ್ಚಾಗಿದೆ ಎಂದು ಹೇಳಿಕೆ ನೀಡಿದ್ದಾರೆನ್ನಲಾಗಿದೆ. ಆದರೆ ಇದಕ್ಕೆ ಮರ ಕಡಿಯಲು ಅರಣ್ಯ ಇಲಾಖೆಯಿಂದ ಯಾವದೇ ಅನುಮತಿ ಪಡೆಯಲಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾಲೀಕರ ವಿರುದ್ಧ ಅರಣ್ಯ ಕಾಯ್ದೆಯಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆರೋಪ ಎದುರಿಸುತ್ತಿರುವವರು ಇದೀಗ ನಾಪತ್ತೆಯಾಗಿದ್ದು, ತನಿಖೆ ಮುಂದುವರಿಯುತ್ತಿದೆ.