ಕೊರೊನಾ ಕಾಯಿಲೆಯೇ ಅಲ್ಲ, ಆದರೆ, ಬದುಕುವದೇ ವೈರಸ್ ಆಗಿದೆ. ಹೀಗೆಂದವರು ಯಾರು ಗೊತ್ತಾ? ತನಗೂ ಸೇರಿದಂತೆ ತನ್ನ ಐವರು ಕುಟುಂಬ ಸದಸ್ಯರ ಪೈಕಿ ಮೂವರಿಗೆ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದ್ದ ತೊರೆನೂರಿನ ರೈತ ವಿರೂಪಾಕ್ಷ ಅವರು. ಇವರಿಗೆ 50 ವರ್ಷ ವಯಸ್ಸು, ಇವರ ತಾಯಿ ಜಯಮ್ಮ ಅವರಿಗೆ 85. ಇಬ್ಬರಿಗೂ ಪಾಸಿಟಿವ್ ಬಂದಿತ್ತು. ಮನೆಯಲ್ಲಿ ಪತ್ನಿ, ಇಬ್ಬರು ಪುತ್ರರಿದ್ದು ಓರ್ವ ಪುತ್ರನಿಗೂ ಪಾಸಿಟಿವ್ ಬಂದಿತ್ತು. ವಿರೂಪಾಕ್ಷ ಅವರು ತಮ್ಮ ತಾಯಿಯನ್ನು ಕೋವಿಡ್ ಆಸ್ಪತ್ರೆಯಲ್ಲಿ ನೋಡಿಕೊಂಡು ಅವರೂ ಅಲ್ಲಿಯೇ ಐದು ದಿನಗಳ ಕಾಲ ಇದ್ದರು. ಅವರಿಬ್ಬರಿಗೂ ಬಳಿಕ ನೆಗೆಟಿವ್ ಬಂದಿತು. ತಮ್ಮ ತಾಯಿಯಂತೂ ಯಾವದೇ ಔಷಧಿ ಸೇವಿಸದೆ ಗುಣಮುಖರಾದರು. ಏಕೆಂದರೆ ಅವರೂ ರೈತರಾಗಿ ದುಡಿದವರು. ತಮ್ಮ ಸ್ವಂತ ಬಲದಿಂದ ವೈರಸ್ ಜಯಿಸಿದ್ದಾರೆ. ತನಗಂತೂ ಯಾವದೇ ವೈರಸ್ ತಟ್ಟಿದರೂ ಲೆಕ್ಕಕ್ಕಿಲ್ಲ ಎಂದು ವಿರೂಪಾಕ್ಷ ನುಡಿಯುತ್ತಾರೆ. ಅದೊಂದು ಕಾಯಿಲೆಯೇ ಅಲ್ಲ. ಅದಕ್ಕಿಂತ ಮಧು ಮೇಹ, ಅಸ್ತಮಾ, ಬಿ.ಪಿ. ಮೊದಲಾದ ಕಾಯಿಲೆಗಳಿಂದ ಸಾಯುವವರೇ ಜಾಸ್ತಿ ಎನ್ನುತ್ತಾರೆ.

ತೊರೆನೂರಿನಲ್ಲಿ ಇಡೀ ಮನೆ ಸೀಲ್ ಆಗಿತ್ತು. ಜೊತೆಗೆ ಆಸ್ಪತ್ರೆ ,ಕ್ವಾರಂಟೈನ್ ಎಂದು ಕಾಲ ವ್ಯರ್ಥವಾಯಿತು. ಒಂದು ತಿಂಗಳ ಕಾಲ ಮನೆಯಿಂದ ಹೊರಬಾರದಂತೆ ನಮಗೆ ಒಂದಲ್ಲ ಒಂದು ರೀತಿ ನಿರ್ಬಂಧ ವಿಧಿಸಲಾಗಿತ್ತು. ತನಗೆ ಒಂದೂವರೆ ಎಕರೆ ಭೂಮಿಯಿದ್ದು, ಸಾವಯವ ಗೊಬ್ಬರ ಬಳಸಿ ತರಕಾರಿ ಬೆಳೆದು ವ್ಯಾಪಾರ ಮಾಡುತ್ತಿದ್ದುದೂ ಸ್ಥಗಿತಗೊಂಡಿತು. ಜೋಳದ ಬೆಳೆ ನೆಲ ಕಚ್ಚಿದೆ. ಶುಂಠಿಯೂ ಹಾಳಾಗಿದೆ. ತರಕಾರಿ ಗಿಡಗಳೂ ಹೋಗಿವೆ. ಸಕಾಲದಲ್ಲಿ ಕೆಲಸ ಮಾಡಲಾಗದೆ ಹೀಗಾಗಿದೆ. ಕೊರೊನಾ ಕಾಯಿಲೆ ಭಯಕ್ಕಿಂತ ತನ್ನ ಕುಟುಂಬದ ಆರ್ಥಿಕ ಸ್ಥಿತಿಗೆ ಹೊಡೆತ ನೀಡಿರುವದೇ ಆಘಾತಕಾರಿ. ಸಾಯಬೇಕೆಂದಿದ್ದರೂ ಕುಟುಂಬಕ್ಕೋಸ್ಕರ ಗಟ್ಟಿ ಮನಸ್ಸು ಮಾಡಿ ಬದುಕಿದ್ದೇನೆ ಎಂದು ನೋವಿನ ನುಡಿಯಾಡಿದರು. ಕೊರೊನಾ ಟೆಸ್ಟ್ ವರದಿ ಬರಲು ತಡವಾಯಿತು. ಕೋವಿಡ್ ಆಸ್ಪತೆಯಲ್ಲಿದ್ದು ಹೊರ ಬಂದ ಬಳಿಕವೂ ನಿರ್ಬಂಧ ವಿಧಿಸಿ ಬೆಳೆಗಳೆಲ್ಲ ನಾಶಗೊಂಡಿದ್ದು ಇದೀಗ ಕುಟುಂಬವನ್ನು ಉಳಿಸಿಕೊಳ್ಳಲು ದಾರಿಯೇ ಕಾಣದಾಗಿರುವದಾಗಿ ಕೇವಲ ಕೃಷಿಯನ್ನೇ ನಂಬಿ ಬದುಕುತ್ತಿರುವ ವಿರೂಪಾಕ್ಷ ಖೇದ ವ್ಯಕ್ತಪಡಿಸಿದರು. ಅಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೂ ಶುಲ್ಕ ಕಟ್ಟಲಾಗುತ್ತಿಲ್ಲ. ಇನ್ನೊಂದೆಡೆ ನಾವು ಕೊರೊನಾದಿಂದ ಸಂಪೂರ್ಣ ಮುಕ್ತರಾಗಿದ್ದರೂ ನೆರೆ ಕರೆ ಮಂದಿ ಸಂಶಯದಿಂದ ನೋಡುತ್ತ ಹತ್ತಿರವೂ ಸುಳಿಯದೆ ನಮ್ಮನ್ನು ದೂರ ಮಾಡಿರುವದು ಇನ್ನೂ ಮನಸ್ಸಿಗೆ ಬೇಸರವುಂಟುಮಾಡಿದೆ ಎಂದರು. ನಿಜಕ್ಕೂ ಕೊರೊನಾ ಎನ್ನುವದು ಏನೂ ಅಲ್ಲ. ಅದರ ಪರಿಣಾಮದ ಆರ್ಥಿಕ ಮುಗ್ಗಟ್ಟೇ ಕೊರೊನಾ ವೈರಸ್ ಪರಿಣಾಮಕ್ಕಿಂತ ಹಾನಿಕರವಾಗಿದೆ ಎಂದು ವಿರೂಪಾಕ್ಷ ಅಂತರಾಳದ ನುಡಿಯಾಡಿದರು.