ಕಣಿವೆ, ಆ. 20 : ರಾಜ್ಯದ ಮೊದಲ ಕ್ರೀಡಾ ಶಾಲೆ ಹಾಗೂ ಎರಡನೇ ಸೈನಿಕ ಶಾಲೆ ಇರುವ, ಜಿಲ್ಲೆಯ ಶಿಕ್ಷಕರಿಗೆ ತರಬೇತಿ ನೀಡುವ ಡಯಟ್ ಇರುವ ಅಷ್ಟೇ ಏಕೆ ರಾಜ್ಯ ಸರ್ಕಾರದ ಹಲವು ಇಲಾಖೆಗಳ ಆಗರವೇ ಇರುವ ಕೂಡಿಗೆ ಕೃಷಿ ಫಾರಂ ಪ್ರವೇಶ ದ್ವಾರ ಕಸ ಕಡ್ಡಿ, ತ್ಯಾಜ್ಯಗಳಿಂದ ಆವೃತವಾಗಿ ಮಳೆಯ ನೀರಿನೊಳು ಮಿಳಿತವಾಗಿ ಗಬ್ಬೆದ್ದು ನಾರುತ್ತಿದೆ. ಆದರೂ ಕೂಡ ಇಲ್ಲಿನ ಕೂಡುಮಂಗಳೂರು ಗ್ರಾಮ ಪಂಚಾಯತಿಗೆ ಇದು ಕಾಣುತ್ತಲೇ ಇಲ್ಲ. ಈ ಪ್ರವೇಶ ದ್ವಾರದಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆ ಇದೆ. ಕಾಪೆರ್Çೀರೇಷನ್ ಬ್ಯಾಂಕ್ ವತಿಯಿಂದ ತೆರೆದಿರುವ ಕೌಶಲ್ಯ ಅಭಿವೃದ್ಧಿ ತರಬೇತಿ ಆಲಯವೂ ಇಲ್ಲಿದೆ. ಆದರೆ ಇಲ್ಲಿಗೆ ಬರುವ ಎಲ್ಲರೂ ಕೂಡ ಈ ಕಸ ತ್ಯಾಜ್ಯದ ವಾಸನೆಗೆ ಬೆಚ್ವಿ ಮಾಸ್ಕ್ ಧರಿಸುತ್ತಿದ್ದಾರೆ ವಿನಃ ಕೊರೊನಾಕ್ಕೆ ಹೆದರಿ ಅಲ್ಲ ಎನ್ನುತ್ತಾರೆ ಇಲ್ಲಿನ ಹೋಟೆಲ್ ವ್ಯಾಪಾರಿ ಸುಂದರ. ಇದೇ ಫಾರಂ ಒಳಗೆ ಕೋವಿಡ್ ಸೆಂಟರ್ ಆಗಿರುವ ಮೊರಾರ್ಜಿ ದೇಸಾಯಿ ಶಾಲೆ, ಸರ್ಕಾರಿ ಪಿಯು ಕಾಲೇಜು ಎಲ್ಲವೂ ಇಲ್ಲಿಯೇ ಇದ್ದು ಇಲ್ಲಿನ ನಿವಾಸಿಗಳು ರಸ್ತೆಯಲ್ಲಿ ಮುಕ್ತವಾಗಿ ತಿರುಗಾಡುವ ಒಳ್ಳೆಯ ವಾತಾವರಣವನ್ನು ಸ್ಥಳೀಯ ಪಂಚಾಯತಿ ಕೂಡಲೇ ಮಾಡಬೇಕಿದೆ. ಅಲ್ಲದೇ ಇಲ್ಲಿ ಕಸ ತ್ಯಾಜ್ಯ ಸುರಿಯದಂತೆ ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಸ್ವಚ್ಛ ರಸ್ತೆ ಹಾಗೂ ಸ್ವಚ್ಛವಾದ ಕೃಷಿ ಫಾರಂ ಮಾಡಬೇಕಿದೆ ಎಂದು ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಪಿ.ಹಮೀದ್ ಆಗ್ರಹಿಸಿದ್ದಾರೆ.
-ಮೂರ್ತಿ