(ನಿನ್ನೆಯ ಸಂಚಿಕೆಯಿಂದ) ಸವಾಲುಗಳು: 1. ಭೌಗೋಳಿಕ ವಿಸ್ತಾರ, ಬಹುಭಾಷಾ ಹಾಗೂ ಬಹು ಸಂಸ್ಕøತಿಯ ಹಿನ್ನೆಲೆಯಲ್ಲಿ ಏಕರೂಪದ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಾಗ ಅನೇಕ ರಾಜಕೀಯ ಹಾಗೂ ಸಾಂಸ್ಕøತಿಕ ಸವಾಲುಗಳು ಎದುರಾಗುತ್ತದೆ. ತ್ರಿಭಾಷಾ ಸೂತ್ರದ ಅಳವಡಿಕೆಯಲ್ಲಿ ಈಗಾಗಲೇ ತಮಿಳುನಾಡು ಹಾಗೂ ಕೇರಳ ವಿರೋಧವನ್ನು ವ್ಯಕ್ತಪಡಿಸಿದೆ. ಬಳಿಕ ಉತ್ತರ ಭಾರತದ ರಾಜ್ಯಗಳು ಕೂಡ ತ್ರಿಭಾಷಾ ಸೂತ್ರವನ್ನು ಈ ಹಿಂದೆ ಕೂಡ ಅಳವಡಿಸಿಲ್ಲ. ಹಾಗಾಗಿ ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗುವ ಸಂಭವ ಹೆಚ್ಚು. ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರ ಈಗಾಗಲೇ ಜಾರಿಯಲ್ಲಿದೆ.

2. 10+2+3 ಮಾದರಿ ಬದಲು 5+3+3+4 ಮಾದರಿಯನ್ನು ಅಳವಡಿಸುವ ಸಂದರ್ಭದಲ್ಲಿ ಕೂಡ ಖಾಸಗಿ ಒಡೆತನದ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಆಕ್ಷೇಪಣೆಯನ್ನು ವ್ಯಕ್ತಪಡಿಸಬಹುದು. ಇದಕ್ಕೆ ಮೂಲ ಕಾರಣ ಭೌತಿಕ ಸವಲತ್ತುಗಳ ನಿರ್ಮಾಣ, ಶಿಕ್ಷಕ ವಿದ್ಯಾರ್ಥಿ ಅನುಪಾತ (1:30), ನಾವಿನ್ಯತೆಯನ್ನು ಒಳಗೊಂಡ ಪಠ್ಯಕ್ರಮ ಹಾಗೂ ಭೋಧನಾ ಕ್ರಮ, ತಂತ್ರಜ್ಞಾನದ ಅಳವಡಿಕೆ ಹಾಗೂ ಅಂಗೀಕೃತ (ಂಜಿiಟiಚಿಣeಜ) ಕಾಲೇಜುಗಳ ಸ್ಥಾನದಲ್ಲಿ ಸ್ವಾಯತ್ತ (ಂuಣoಟಿomous) ಪದವಿ ಪ್ರಧಾನದ ಕಾಲೇಜುಗಳನ್ನಾಗಿ ಪರಿವರ್ತನೆ. ಈ ಎಲ್ಲಾ ಬದಲಾವಣೆಗೆ ಪೂರಕವಾದ ಹಣಕಾಸಿನ ಸೌಲಭ್ಯವನ್ನು ಈ ನೀತಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

3. ಹಣಕಾಸಿನ ಕುರಿತಂತೆ ಈ ಶಿಕ್ಷಣ ನೀತಿಯಲ್ಲಿ ಉಲ್ಲೇಖವಾದ ಅಂಶ ಎಂದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಿನ 10 ವರುಷಗಳ ಅವಧಿಯಲ್ಲಿ ಹೂಡಿಕೆ ಪ್ರಮಾಣವನ್ನು ಶೇ. 20ಗೆ ಏರಿಸುವ ಸೂಚನೆಯನ್ನು ನೀಡಲಾಗಿದೆ. ಈ ಹೂಡಿಕೆ ಸರಕಾರಿ ಸ್ವಾಮ್ಯದ ಹಾಗೂ ಅರೆ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಪಾಲು ಎಷ್ಟು ಎನ್ನುವ ಸ್ಪಷ್ಟ ಸೂಚನೆ ಇಲ್ಲ. ಮುಂದೆ ಪ್ರತ್ಯೇಕವಾದ ಮಾರ್ಗಸೂಚಿಯನ್ನು ಹೊರಡಿಸಲಾಗುತ್ತದೆ ಎನ್ನುವ ಅಂಶವನ್ನು ಮಾತ್ರ ನೀತಿಯಲ್ಲಿ ಹೇಳಲಾಗಿದೆ.

4. ಸಮಾನ ಗುಣಮಟ್ಟದ ಸಾರ್ವತ್ರಿಕ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವಾಗ ರಾಜ್ಯ ಸರಕಾರದ ವಿಶ್ವ ವಿದ್ಯಾನಿಲಯಗಳ ಸ್ವಾಮ್ಯತೆ ಹಾಗೂ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ಹಾಗಾಗಿ ಕರ್ನಾಟಕದ್ಲಲೂ ಏಕರೂಪವಾದ ಪದವಿ ಪಠ್ಯಕ್ರಮ ಹಾಗೂ ಸಮಾನ ವೇಳಾ ಪಟ್ಟಿಯನ್ನು ಕರ್ನಾಟಕದ ವಿ.ವಿ.ಗಳು ವಿರೋಧಿಸಿವೆ. ಹಾಗಾಗಿ ಇಡೀ ದೇಶಕ್ಕೊಂದು ಸಮಾನ ಶಿಕ್ಷಣ ಎಂದಾಗ ಅದಕ್ಕೆ ವಿರೋಧ ಬರಬಹುದು.

5. ಈ ಹಿಂದೆ ಇದ್ದ ಅಧಿಕಾರ ವಿಕೇಂದ್ರಿಕರಣದ ಬದಲಾಗಿ ಕೇಂದ್ರೀಕೃತ ಮಾದರಿಯನ್ನು ಸ್ವತಂತ್ರ ಹಾಗೂ ಸ್ವಾಯತ್ತ ಬಹುರೂಪಿ ಸಂಸ್ಥೆಗಳ ಮೂಲಕ ಕಾರ್ಯರೂಪಕ್ಕೆ ತರಲು ಆಯೋಜಿಸಿದೆ.

6. ಬಹುರೂಪಿ ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಹೊಂದಾಣಿಕೆ ತಪ್ಪಿದ್ದಲ್ಲಿ ಸಬಲ ಉದ್ದೇಶವಿದ್ದರೂ ಕೂಡ ಗೊಂದಲ ಸೃಷ್ಟಿಯಾಗುತ್ತದೆ. (ಇg.: ಓಊಇಖಂ, ಊಇಉಅ, ಉಇಅ, ಓಊಇಕಿಈ, ಓಂಂಅ).

7. ಸರಕಾರಿ ಶಾಲೆ/ ಕಾಲೇಜುಗಳನ್ನು ಖಾಸಗಿ ಶಾಲೆ / ಕಾಲೇಜುಗಳೊಂದಿಗೆ ಜೋಡಣೆ ಮಾಡಿ ತನ್ಮೂಲಕ ನಿಯಮಿತ ಸಂಪನ್ಮೂಲಗಳನ್ನು ಗರಿಷ್ಟ ಮಿತಿಯಲ್ಲಿ ಸಮಾನವಾಗಿ ಶೈಕ್ಷಣಿಕ ಅಭಿವೃದ್ಧಿಗೆ ಬಳಸಿಕೊಳ್ಳುವ ಯೋಜನೆಯನ್ನು ಈ ಶಿಕ್ಷಣ ನೀತಿ ಹಮ್ಮಿಕೊಂಡಿದೆ.

ವಿಶ್ಲೇಷಣೆ : 1. ಶಿಕ್ಷಣ ನೀತಿಯ ಮುಖ್ಯಾಂಶಗಳು ಹಾಗೂ ಸವಾಲುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಒಂದು ಆದರ್ಶ ತುಂಬಿದ, ಕನಸು ಮೂಡಿಸುವ ಶಿಕ್ಷಣ ನೀತಿ ವಾಸ್ತವಕ್ಕೆ ಬಹಳಷ್ಟು ದೂರವಾಗಿದೆ.

2. ಕೆಲವಾರು ಸಂಗತಿಗಳನ್ನು ಈ ಶಿಕ್ಷಣ ನೀತಿ ತಾತ್ವಿಕ ಹಾಗೂ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪರಿಶೀಲಿಸಿಲ್ಲ ಎನ್ನುವ ಅಂಶ ಬಹಳ ಸ್ಪಷ್ಟ. 3 ವರುಷದ ಪದವಿ ತರಗತಿಯನ್ನು 4 ವರುಷಕ್ಕೆ ಏರಿಸುವುದು ಯಾಕೆ? 5 ವರುಷದ ಸಮಗ್ರ ಸ್ನಾತಕೋತ್ತರ ಪದವಿಯನ್ನು ಜಾರಿಗೊಳಿಸುವುದು ಏಕೆ? ಇದರಿಂದ ಆಗುವ ಶೈಕ್ಷಣಿಕ ಪರಿಣಾಮದ ಕುರಿತಂತೆ ಕೂಡಾ ಒಂದು ಭೌದ್ಧಿಕ ವಿವರಣೆ ಕೂಡಾ ಇಲ್ಲ. ಆಳಕ್ಕಿಳಿದು ಗಮನಿಸಿದಾಗ ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ಅವಕಾಶ ನೀಡುವ ಹಿನ್ನೆಲೆಯಲ್ಲಿ ಈ ಪರಿಯ ಬದಲಾವಣೆಗಳನ್ನು ತಂದಿರಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

- ಡಾ. ಪಿ.ಎನ್. ಉದಯಚಂದ್ರ, ಮುಖ್ಯಸ್ಥರು, ವಾಣಿಜ್ಯ ವಿಭಾಗ, ಶ್ರೀ ಧ.ಮಂ. ಸ್ವಾಯತ್ತ ಕಾಲೇಜು, ಉಜಿರೆ.

(ನಾಳಿನ ಸಂಚಿಕೆ ನೋಡಿ)