ಮಡಿಕೇರಿ, ಆ. 19: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೈಗೊಂಡಿರುವ ನಿಲುವು ಸಮಯೋಚಿತವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಸಮರ್ಥಿಸಿಕೊಂಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಮಹೇಶ್, ನವೀನ್ ಎಂಬ ಕಾಂಗ್ರೆಸ್ ಕಾರ್ಯಕರ್ತ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ಗೆ ಸಂಬಂಧಿಸಿದಂತೆ ಪೊಲೀಸರಿಗೆ ಪುಕಾರು ನೀಡಿದ ಬಳಿಕ ಮೊಕದ್ದಮೆ ದಾಖಲಿಸಲು ವಿಳಂಬವಾಗಿದ್ದರೆ, ಮೇಲಧಿಕಾರಿಗಳಿಗೆ ದೂರು ನೀಡಿ ಒತ್ತಡ ಹೇರಬಹುದಾಗಿತ್ತು. ಆದರೆ, ಹಾಗೆ ಮಾಡದೆ ಕತ್ತಲಾಗುವುದನ್ನೇ ಕಾಯುತ್ತಿದ್ದ ಕಿಡಿಗೇಡಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ದೊಂಬಿ ಎಬ್ಬಿಸಿದ್ದಾರೆ. ಕಾಂಗ್ರೆಸ್ ಶಾಸಕ ಹಾಗೂ ಅಕ್ಕಪಕ್ಕದ ಮನೆಗಳಿಗೆ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಲ್ಲದೆ ಮಾಧ್ಯಮದವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಗಲಭೆ ಆರಂಭವಾಗುತ್ತಿದ್ದಂತೆ ಸರಕಾರ ಗೋಲಿಬಾರ್ಗೆ ಆದೇಶ ನೀಡಿದ್ದಿದ್ದರೆ ಹಲವಷ್ಟು ಜೀವಹಾನಿಯಾಗುವ ಸಂಭವವಿತ್ತು.
ಈ ನಿಟ್ಟಿನಲ್ಲಿ ಸರಕಾರ ಸರಿಯಾದ ಜಾಗೃತೆ ವಹಿಸಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ಕಾಂಗ್ರೆಸ್ಸಿಗರು ರಾಜಕೀಯ ಉದ್ದೇಶದಿಂದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಘಟನೆಯನ್ನು ಕಾಂಗ್ರೆಸ್, ಜೆಡಿಎಸ್ ಎಲ್ಲೂ ಗಟ್ಟಿ ಧ್ವನಿಯಲ್ಲಿ ಖಂಡಿಸಲು ಆಗದೆ ಪರದಾಡುತ್ತಿದ್ದು, ನಿನ್ನೆ ದಿನ ಕಾಂಗ್ರೆಸ್ನ ಶಾಸಕರುಗಳು ಸಿ.ಎಂ. ಇಬ್ರಾಹಿಮ್ ನೇತೃತ್ವದಲ್ಲಿ ಪೆÇಲೀಸ್ ಮಹಾ ನಿರ್ದೇಶಕರುಗಳನ್ನು ಭೇಟಿಯಾಗಿ ಗಲಭೆ ಕೋರರನ್ನ ಅಮಾಯಕರು ಎಂಬಂತೆ ಬಿಂಬಿಸಲು ಹೊರಟಿರುವುದು ಮತ್ತು ಒತ್ತಡ ಹೇರಲು ಹೊರಟಿರುವುದು ಖಂಡನೀಯ; ಸತತ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಎಸ್ಡಿಪಿಐ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ತನ್ನ ಧರ್ಮದ ಯುವಕರನ್ನು ಹಿಂದೂಗಳ ಮೇಲೆ ಎತ್ತಿ ಕಟ್ಟಿ ಗಲಭೆ ಎಬ್ಬಿಸುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಹೆಗ್ಗಡೆ ನಗರದಲ್ಲಿನ ತನ್ನ ಕಚೇರಿಯಲ್ಲಿ ಸಿಕ್ಕಿದ ಮಾರಕಾಸ್ತ್ರಗಳೇ ಸಾಕ್ಷಿಯಾಗಿವೆ ಎಂದು ಹೇಳಿದ್ದಾರೆ.
ಸರ್ಕಾರ ಮತ್ತು ಪೆÇಲೀಸ್ ಇಲಾಖೆ ಇದುವರೆಗೂ ಬಹಳ ತಾಳ್ಮೆಯಿಂದ ಗಲಭೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು ನೈಜ ಆರೋಪಿಗಳಿಗೆ ಶಿಕ್ಷೆ ಆಗಲೇ ಬೇಕಿದೆ. ಗಲಭೆಗೆ ಸಂಬಂಧಪಟ್ಟಂತೆ ನಷ್ಟ ವಸೂಲಾತಿ ಕೂಡ ಉತ್ತರ ಪ್ರದೇಶದ ಯೋಗಿ ಸರಕಾರದ ಮಾದರಿಯಲ್ಲೇ ನಡೆಯಬೇಕಿದೆ. ಸರ್ಕಾರ ಈ ನಿಟ್ಟಿನಲ್ಲಿ ಒಳ್ಳೆಯ ತೀರ್ಮಾನ ಕೈಗೊಳ್ಳಲಿದೆ ಎಂಬದು ಜನತೆಯ ಆಶಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.