ಸೋಮವಾರಪೇಟೆ, ಆ.19: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರೇಂಜರ್ ಬ್ಲಾಕ್‍ನ ಪೊಲೀಸ್ ವಸತಿ ಗೃಹದ ಬಳಿ ನಿರ್ಮಿಸಿರುವ ಬೃಹತ್ ತಡೆಗೋಡೆ ಕುಸಿಯುವ ಹಂತಕ್ಕೆ ತಲುಪಿದ್ದು, ಸ್ಥಳೀಯರು ಸೇರಿದಂತೆ ಪೊಲೀಸ್ ಇಲಾಖೆಯ ವಸತಿ ಗೃಹದ ಮಂದಿಗೂ ಆತಂಕ ಎದುರಾಗಿದೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಪೊಲೀಸ್ ವಸತಿ ಗೃಹದ ಬಳಿ ನಿರ್ಮಿಸಿರುವ ಲಕ್ಷಾಂತರ ವೆಚ್ಚದ ತಡೆಗೋಡೆ ಇದೀಗ ಮಳೆಗೆ ಜರಿಯುತ್ತಿದ್ದು, ಭಾರೀ ಪ್ರಮಾಣದ ಹಾನಿ ಉಂಟುಮಾಡುವ ಅಪಾಯವಿದೆ. ಈ ಬಗ್ಗೆ ಸ್ಥಳೀಯರು ಪಟ್ಟಣ ಪಂಚಾಯಿತಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯರ ದೂರಿನ ಹಿನ್ನೆಲೆ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಠಾಣಾಧಿಕಾರಿ ಶಿವಶಂಕರ್ ಸಂಬಂಧಿಸಿದ ಮೈಸೂರಿನ ಎಇಇಯನ್ನು ಸಂಪರ್ಕಿಸಿ ತಡೆಗೋಡೆಯನ್ನು ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಪೊಲೀಸ್ ವಸತಿ ಗೃಹಕ್ಕೆ ನಿರ್ಮಿಸಿರುವ ತಡೆಗೋಡೆ ಅಪಾಯಕಾರಿಯಾಗಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿ, ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.