ಸೋಮವಾರಪೇಟೆ,ಆ.19: ಆಲೇಕಟ್ಟೆ ರಸ್ತೆಯ ಪದ್ಮಕ್ಯಾಂಟೀನ್ ಜಂಕ್ಷನ್‍ನಿಂದ ಕಾನ್ವೆಂಟ್‍ಬಾಣೆಗೆ ತೆರಳುವ ರಸ್ತೆಯಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದ ಹಿನ್ನೆಲೆ ಸ್ಥಳೀಯರು ನಿನ್ನೆ ದಿನ ಬಾಳೆ ಗಿಡ ನೆಟ್ಟು ಪ್ರತಿಭಟಿಸಿದ್ದರು. ಪರಿಣಾಮ, ಒಂದೇ ದಿನದಲ್ಲಿ ರಸ್ತೆ ದುರಸ್ತಿಗೊಂಡಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸೋಮವಾರಪೇಟೆ-ಶಾಂತಳ್ಳಿ ರಾಜ್ಯಹೆದ್ದಾರಿಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತಡೆಬಿದ್ದಿದ್ದು, ಪರಿಣಾಮ ಶಾಂತಳ್ಳಿ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಕಾನ್ವೆಂಟ್‍ಬಾಣೆಯಿಂದ ಆಲೇಕಟ್ಟೆ, ಪದ್ಮಕ್ಯಾಂಟೀನ್ ಜಂಕ್ಷನ್ ಮಾರ್ಗವಾಗಿ ತೆರಳುತ್ತಿವೆ.
ಅಧಿಕ ವಾಹನಗಳ ಓಡಾಟದಿಂದ ರಸ್ತೆಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಹಲವಷ್ಟು ಅವಘಡಗಳು ಸಂಭವಿಸುತ್ತಿದ್ದವು. ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಹಲವಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿದ್ದರೂ ಯಾವದೇ ಪ್ರಯೋಜನವಾಗಿರಲಿಲ್ಲ.
ಈ ಹಿನ್ನೆಲೆ ನಿನ್ನೆ ದಿನ ಸ್ಥಳೀಯರು ರಸ್ತೆಯ ಗುಂಡಿಗಳಿಗೆ ಬಾಳೆಗಿಡ ನೆಟ್ಟು ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಜಿ.ಪಂ. ಅಭಿಯಂತರ ವೀರೇಂದ್ರ ಅವರು, ರಸ್ತೆ ದುರಸ್ತಿಗಾಗಿ ಗುತ್ತಿಗೆದಾರರಿಗೆ ಸೂಚಿಸಿದ ಬೆನ್ನಲ್ಲೇ ಇಂದು ಹೊಂಡಗುಂಡಿಗಳಿಗೆ ಮುಕ್ತಿ ನೀಡಲಾಗಿದೆ.
ಸದ್ಯಕ್ಕೆ ವೆಟ್‍ಮಿಕ್ಸ್ ಮತ್ತು ಎಂಸ್ಯಾಂಡ್ ಹಾಕಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗಿದ್ದು, ಮಳೆಹಾನಿ ಪರಿಹಾರ ನಿಧಿಯಡಿ ಮುಂದಿನ ದಿನಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವದು ಎಂದು ಅಭಿಯಂತರರು ಭರವಸೆ ನೀಡಿದ್ದಾರೆ.