ನಮಗೆ ಕೋವಿಡ್ನ ಯಾವುದೇ ಲಕ್ಷಣಗಳಿರಲಿಲ್ಲ. ಆದರೂ ನಮ್ಮ ಇಡೀ ಕುಟುಂಬವನ್ನು ಪರೀಕ್ಷೆಗೊಳಪಡಿಸಿದರು. ನೆಗೆಟಿವ್ ವರದಿ ಬಂದಿತು. ಈ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಪಾಸಿಟಿವ್ ಇದೆ ಎಂದು ಕ್ವಾರಂಟೈನ್ಗೆ ಹಾಕಿದರು ಎಂದು ಆಲೂರು - ಸಿದ್ದಾಪುರ ಬಳಿಯ ದೊಡ್ಡಳ್ಳಿ ಗ್ರಾಮದ ಶೋಧನ್ ಬೇಸರ ವ್ಯಕ್ತಪಡಿಸುತ್ತಾರೆ.
ನಮ್ಮ ನಾದಿನಿಯೋರ್ವರು ಬಂಧುಗಳ ಮನೆಗೆಂದು ಮುಂಬೈಗೆ ತೆರಳಿದ್ದ ಸಂದರ್ಭದಲ್ಲಿ ಕೊರೊನಾ ಸೋಂಕಿನಿಂದಾಗಿ ಎಲ್ಲೆಡೆ ಲಾಕ್ಡೌನ್ ಆಗಿತ್ತು. ಲಾಕ್ಡೌನ್ ಸಡಿಲಗೊಂಡ ಬಳಿಕ ಮಂಡ್ಯ ಬಳಿಯ ನಾಗಮಂಗಲದಲ್ಲಿರುವ ಬಂಧುಗಳ ಮನೆಗೆ ಬಂದು ಅಲ್ಲಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದು, ನಂತರ ದೊಡ್ಡಳ್ಳಿಗೆ ಬಂದಿದ್ದಾರೆ. ಅವರು ಬಂದು 15 ದಿನಗಳಾಗಿತ್ತು. ಯಾವದೇ ತೊಂದರೆ ಇರಲಿಲ್ಲ. ಸ್ಥಳೀಯರ ದೂರಿನ ಪ್ರಕಾರ ಆಶಾಕಾರ್ಯಕರ್ತರು ಹಾಗೂ ಸ್ಥಳೀಯ ವೈದ್ಯರು ಕರೆದೊಯ್ದು ಪರೀಕ್ಷೆ ಮಾಡಿಸಿದರು. ನಾವು ಮೂವರು ಸಹೋದರರಿಗೆ ಪಾಸಿಟಿವ್ ಇದೆ ಎಂದು ಹೇಳಿದರು. ಮರುದಿನ ಕೋವಿಡ್ ಕೇಂದ್ರದ ಪರೀಕ್ಷೆಯಲ್ಲಿ ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ ಎಂದು ಹೇಳಿದರು.
ಅನಾವಶ್ಯಕವಾಗಿ ಗೊಂದಲ ಮೂಡಿಸಿದಕ್ಕಾಗಿ ಹಾಗೂ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದೆವು. ಟಿವಿ, ಮಾಧ್ಯಮದವರಿಗೂ ಅವ್ಯವಸ್ಥೆ ಬಗ್ಗೆ ಹೇಳಿದೆವು. ಆ ಕಾರಣಕ್ಕಾಗಿ ಮಧ್ಯಾಹ್ನದ ನಂತರ ಪಾಸಿಟಿವ್ ಬಂದಿದೆ ಎಂದು ಕ್ವಾರಂಟೈನ್ಗೆ ಹಾಕಿದರು.
ಪರೀಕ್ಷಾ ವರದಿಯ ದಾಖಲೆ ತೋರಿಸುವಂತೆ ಕೋರಿದಾಗ ವರದಿಯಲ್ಲಿ ಯಾವದೂ ಸ್ಪಷ್ಟವಾಗಿ ದಾಖಲಾಗಿರಲಿಲ್ಲ. ಹತ್ತು ದಿನಗಳ ಬಳಿಕ ತಾಯಿ ಹಾಗೂ ನಾದಿನಿಯನ್ನು ನೆಗೆಟಿವ್ ಎಂದು ಕಳುಹಿಸಿದರು. ನಮ್ಮನ್ನು ಮಾತ್ರ 18 ದಿನ ಇರಿಸಿಕೊಂಡಿದ್ದರು. ಆದರೂ ನಮಗೆ ಯಾವದೇ ಲಕ್ಷಣಗಳಿರಲಿಲ್ಲ ಎಂದು ಶೋಧನ್ ಹೇಳುತ್ತಾರೆ. ನಮಗೆ ಸುಮ್ಮನೆ ಪಾಸಿಟಿವ್ ಅಂತ ಹೇಳಿದ್ರಾ? ಯಾವದೂ ನಿಜಾ ಅಂತಾನೆ ಗೊತ್ತಾಗ್ತಿಲ್ಲ ಎಂದು ಹೇಳಿದರು.