ನಾಳೆ ಕೆಆರ್‍ಎಸ್‍ಗೆ ಸಿಎಂ ಬಾಗಿನ

ಮಂಡ್ಯ, ಆ. 19: ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಪ್ರವಾಹ ಭೀತಿ ಶುರುವಾಗಿದೆ. ಈ ನಡುವಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೌರಿ ಹಬ್ಬದ ದಿನದಂದು ಕಾವೇರಿ ತಾಯಿಗೆ ಬಾಗಿನ ಅರ್ಪಿಸಲಿದ್ದಾರೆ. ಈಗಾಗಲೇ 4 ಬಾರಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸಿರುವ ಯಡಿಯೂರಪ್ಪ ಅವರು 5ನೇ ಬಾರಿ ಬಾಗಿನ ಅರ್ಪಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 2018ರ ಆಗಸ್ಟ್ ತಿಂಗಳಿನಲ್ಲಿ ಕೆಆರ್‍ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮೂಲಕ ಹೆಚ್ಚಿನ ಬಾರಿ ಬಾಗಿನ ಅರ್ಪಿಸಿದ ಕೀರ್ತಿಗೆ ಯಡಿಯೂರಪ್ಪ ಪಾತ್ರರಾಗಿದ್ದಾರೆ. ಕಳೆದ ವರ್ಷ ತಾ. 21 ರಂದು ಕೆಆರ್‍ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆ ಯಡಿಯೂರಪ್ಪ ಅವರು ಬಾಗಿನ ಅರ್ಪಿಸಿದ್ದರು. ಕಾಕತಾಳೀಯವೆಂಬಂತೆ ಈ ವರ್ಷ ಕೂಡ ಕೆಆರ್‍ಎಸ್ ಜಲಾಶಯ ಆಗಸ್ಟ್ ತಿಂಗಳಿನಲ್ಲಿ ಪುನಃ ಭರ್ತಿಯಾಗಿದೆ.

ಗುರಿಯಂತೆ ಸೋಂಕಿತರ ಪರೀಕ್ಷೆ

ಬೆಂಗಳೂರು, ಆ. 19: ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ಬೇಗನೆ ಪತ್ತೆ ಮಾಡಲು, ನಿಗದಿಪಡಿಸಿದ ಗುರಿಯಂತೆ ಪರೀಕ್ಷೆ ನಡೆಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ. ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಹಾಗೂ ಪ್ರಯೋಗಾಲಯಗಳ ಮುಖ್ಯಸ್ಥರೊಂದಿಗೆ ಸಚಿವ ಡಾ. ಕೆ. ಸುಧಾಕರ್ ಅವರು ವೀಡಿಯೋ ಸಭೆ ನಡೆಸಿದರು. ಕೊರೊನಾ ಸೋಂಕಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಮಾಡಿದರೆ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಬಹುದು. ಆದ್ದರಿಂದ ಪ್ರತಿ ಪ್ರಯೋಗಾ ಲಯಗಳಲ್ಲಿ ನಿಗದಿ ಮಾಡಿದಷ್ಟು ಸಂಖ್ಯೆಯಲ್ಲಿ ಪರೀಕ್ಷೆ ನಡೆಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಮಾಡಲು ಇರುವ ಅಡ್ಡಿಗಳನ್ನು ನಿವಾರಿಸಲು ಸರ್ಕಾರದಿಂದ ಎಲ್ಲ ಬಗೆಯ ನೆರವು ನೀಡಲಾಗುವುದು ಎಂದು ಸಚಿವ ಡಾ. ಕೆ. ಸುಧಾಕರ್ ಸಭೆಗೆ ತಿಳಿಸಿದರು. ಕೋವಿಡ್ ಪರೀಕ್ಷೆಯ ಉಸ್ತುವಾರಿ ಎಸಿಎಸ್ ಡಾ. ಶಾಲಿನಿ ರಜನೀಶ್ ಪಾಲ್ಗೊಂಡಿದ್ದರು.

10 ಸಾವಿರ ಸೇನಾ ಸಿಬ್ಬಂದಿಗಳು ವಾಪಸ್

ನವದೆಹಲಿ, ಆ. 19: ಜಮ್ಮು-ಕಾಶ್ಮೀರದಿಂದ 10 ಸಾವಿರ ಸೇನಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆರ್ಟಿಕಲ್ 370 ರದ್ದತಿ ಹಿನ್ನೆಲೆ ಕಳೆದ ವರ್ಷ ಈ ಪ್ರಮಾಣದಲ್ಲಿ ಸೇನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಕೇಂದ್ರ ಸರ್ಕಾರ ಸೇನಾ ಸಿಬ್ಬಂದಿಗಳನ್ನು ಹಿಂಪಡೆಯುವುದಕ್ಕೆ ಆದೇಶ ನೀಡಿದೆ. ಮೇ ತಿಂಗಳಲ್ಲಿ ಕೇಂದ್ರಾಡಳಿತ ಪ್ರದೇಶದಿಂದ 10 ಸಿಎಪಿಎಫ್ ಕಂಪೆನಿಗಳನ್ನು ಹಿಂಪಡೆಯಲು ಆದೇಶ ನೀಡಿತ್ತು. ಕಳೆದ ಡಿಸೆಂಬರ್‍ನಲ್ಲಿ ಇಂತಹ 72 ಯುನಿಟ್‍ಗಳನ್ನು ಹಿಂಪಡೆಯಲಾಗಿತ್ತು.

ಕೇಂದ್ರ ಉದ್ಯೋಗಿಗಳಿಗೆ ಸಿಇಟಿ ಪರೀಕ್ಷೆ

ನವದೆಹಲಿ, ಆ. 19: ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಕಂಪ್ಯೂಟರ್ ಆಧಾರಿತ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸುವ ಸಲುವಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‍ಆರ್‍ಎ) ರಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಸಂಪುಟ ಸಭೆಯ ನಿರ್ಧಾರ ಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಾವಡೇಕರ್ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಕಂಪ್ಯೂಟರ್ ಆಧಾರಿತ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‍ಆರ್‍ಎ) ರಚಿಸಲು ಅನುಮೋದನೆ ನೀಡಿದೆ’ ಎಂದು ಹೇಳಿದರು.

ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು, ಆ. 19: ಡಿ.ಜೆ. ಹಳ್ಳಿ-ಕೆ.ಜೆ. ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಆಡಳಿತ ಪಕ್ಷವೇ ಸತ್ಯಶೋಧನಾ ತಂಡ ರಚಿಸಿ ಸತ್ಯ ಹುಡುಕುತ್ತೇವೆ ಎಂದು ಹೊರಟಿರುವುದು ಭೀಕರ ಅಪಹಾಸ್ಯವಾಗಿದ್ದು, ಸರ್ಕಾರದ ಈ ನಿರ್ಧಾರ ತನಿಖೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿರುವ ಸಿದ್ದರಾಮಯ್ಯ, ಗಲಭೆಗೆ ಸರ್ಕಾರ ಹಾಗೂ ಗೃಹ ಇಲಾಖೆ ವೈಫಲ್ಯವೇ ಕಾರಣ. ಸರ್ಕಾರ ಘಟನೆಯ ವೈಫಲ್ಯದ ನೈತಿಕ ಜವಾಬ್ದಾರಿ ಹೊರಬೇಕು ಎಂದಿದ್ದಾರೆ. ಸರ್ಕಾರ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಬಿಟ್ಟು. ಪ್ರತಿಪಕ್ಷ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ. ಆಡಳಿತ ಶಕ್ತಿ ಕೇಂದ್ರದ ದೂರದಲ್ಲಿನ ಸ್ಥಳದಲ್ಲಿ ಇಂತಹ ಘಟನೆ ನಡೆದಿದ್ದು, ಅನಾಹುತವನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಸರ್ಕಾರ ಇದ್ದು ಸತ್ತಂತೆ ಎಂದಿದ್ದಾರೆ.

ಕೊರೊನಾ ಕರ್ತವ್ಯದಿಂದ ಶಿಕ್ಷಕರಿಗೆ ಮುಕ್ತಿ

ಬೆಂಗಳೂರು, ಆ. 19: ಕೊರೊನಾ ಕರ್ತವ್ಯದಿಂದ ಶಾಲಾ ಮುಖ್ಯೋಪಾಧ್ಯಾಯರನ್ನು ಕೈಬಿಡುವಂತೆ ಅಧಿಕಾರಿಗಳಿಗೆ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ. ಈ ಸಂಬಂಧ ಆಯುಕ್ತರಿಗೆ ಪತ್ರ ಬರೆದಿರುವ ಸುರೇಶ್‍ಕುಮಾರ್, ಕೋವಿಡ್ ಸಂದರ್ಭದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರುಗಳನ್ನು ತುರ್ತು ಸೇವೆಗೆ ಬಳಸಿಕೊಳ್ಳಲಾಗಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ಶಾಲೆಗಳಲ್ಲಿ ಶಿಕ್ಷಕರ, ವಿಶೇಷವಾಗಿ ಮುಖ್ಯ ಶಿಕ್ಷಕರ ಅಲಭ್ಯತೆಯ ಹಿನ್ನೆಲೆಯಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಕಲಿಕೆಯನ್ನು ಮುಂದವರೆಸುವ ದೂರದೃಷ್ಟಿ ಯೋಜನೆಯಾದ ವಿದ್ಯಾಗಮನ ಅನುಷ್ಠಾನ, ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನವು ಸಮರ್ಪಕವಾಗಬೇಕಾದಲ್ಲಿ ಶಾಲೆಗಳಲ್ಲಿ ಕನಿಷ್ಟ ಪಕ್ಷ ಮುಖ್ಯೋಪಾಧ್ಯಾಯರು ಲಭ್ಯವಿರಬೇಕಾದ ಅವಶ್ಯಕತವಾಗಿರುತ್ತದೆ. ಈ ಹಿನ್ನೆಲೆ ಸರ್ಕಾರಿ ಹಾಗೂ ಅನುದಾನಿಕ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಕೋವಿಡ್ ಜವಾಬ್ದಾರಿಯಿಂದ ಮುಕ್ತಗೊಳಿಸುವಲ್ಲಿ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಗಲಭೆಕೋರರಿಗೆ ಉಗ್ರ ಸಂಪರ್ಕ

ಬೆಂಗಳೂರು, ಆ. 19: ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಎನ್‍ಐಎ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ. ಇದಕ್ಕಾಗಿ ರಾಜ್ಯದ ಗೃಹ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಘಟನೆಯಲ್ಲಿ ಎರಡು ಉಗ್ರ ಗುಂಪುಗಳ ಸಂಪರ್ಕ ಇರುವುದನ್ನು ಎನ್‍ಐಎ ತನಿಖೆಯಲ್ಲಿ ಬಹಿರಂಗಪಡಿಸಿದೆ. ದೇಶದ ವಿರುದ್ಧ ಕೆಲಸ ಮಾಡುತ್ತಿರುವ ಶಕ್ತಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರ್‍ಟಿ ನಗರದಲ್ಲಿರುವ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಂ.ಎಸ್. ರಾಮಯ್ಯ ಕಾಲೇಜು ಆಸ್ಪತ್ರೆಯಲ್ಲಿ ಶಂಕಿತ ಉಗ್ರ ಎನ್ನುವ ಮಾಹಿತಿ ಆಧಾರದಲ್ಲಿ ವೈದ್ಯ ಹಾಗೂ ಆತನ ಸಹಚರರನ್ನು ಬಂಧಿಸಿರುವ ಬಗ್ಗೆ ಈಗಾಗಲೇ ರಾಷ್ಟ್ರೀಯ ತನಿಖಾ ದಳ ಪ್ರಕಟಣೆ ಹೊರಡಿಸಿದೆ. ಕೆಲ ಪ್ರಕರಣದಲ್ಲಿ ನಾನು ಅವರಿಗೆ ಸಹಕಾರ, ಅವರು ನಮಗೆ ಸಹಕಾರ ನೀಡುವುದು ಮುಂದುವರೆದಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ದೇಶದ ಸುರಕ್ಷತೆ ಆಂತರಿಕ ಸಮಸ್ಯೆ ಮತ್ತು ದೇಶದ ಗಡಿಯಾಚೆಗೆ ಇರುವ ಶಕ್ತಿಗಳು ಕೆಲಸ ಮಾಡುತ್ತಿದ್ದು ಅದರ ಮೇಲೆ ಜಂಟಿ ಕಾರ್ಯಾಚರಣೆ ಮಾಡುವುದು ಬಹಳ ಅವಶ್ಯಕವಾಗಿದೆ ಆ ನಿಟ್ಟಿನಲ್ಲಿ ನಾವು ಮುಂದುವರೆಯಲಿದ್ದಾರೆ ಎಂದು ಅವರು ತಿಳಿಸಿದರು.