ಸುಂಟಿಕೊಪ್ಪ, ಆ. 17: ಇಲ್ಲಿನ ಸಮೀಪದ ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಯ ಮೋಟಂಡ ಎ.ಬೋಪಯ್ಯ ಅವರ ತೋಟ, ಗದ್ದೆಗೆ ರಾತ್ರಿ ವೇಳೆ ಆನೆಗಳು ದಾಳಿ ಮಾಡಿ ಕಾಫಿ, ಬಾಳೆ, ನಾಟಿ ಮಾಡಿದ ಗದ್ದೆ ಧ್ವಂಸಗೊಳಿಸಿ ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ನೆಟ್ಲಿ ಬಿ. ಗ್ರಾಮದ ಸಂಜೀವ ಪೂಜಾರಿ ಅವರ ಮನೆಯ ಅಂಗಳದಲ್ಲಿ ಆನೆಗಳು ರಾತ್ರಿ ಸುಮಾರು ಹತ್ತು ನಿಮಿಷಗಳ ಕಾಲ ವಿರಮಿಸಿ ನಂತರ ಅವರು ನಾಟಿ ಮಾಡಿದ ಗದ್ದೆಗೆ ತೆರಳಿ ತುಳಿದು, ಕಾಫಿ ತೋಟದ ಒಳಗೆ ನುಗ್ಗಿದೆ. ಇದರಿಂದ ಭಯ ಭೀತರಾದ ಮನೆಯವರು ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಕಾಲಕಳೆಯುವಂತಾಗಿತ್ತು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಭಾಗದಲ್ಲಿ ಮಳೆಗಾಲ ಪ್ರಾರಂಭವಾದರೆ ಆನೆಗಳು ಕಾಡಿನಿಂದ ಲಗ್ಗೆಯಿಡುತ್ತಿದ್ದು ಪ್ರತಿ ವರ್ಷ ಕೃಷಿ ಫಸಲು ಧ್ವಂಸ ಮಾಡುತ್ತಿದ್ದು, ಇದರ ಬಗ್ಗೆ ದೂರು ನೀಡಿದರೂ ಆನೆಗಳಿಗೆ ಅರಣ್ಯ ಇಲಾಖೆಯಿಂದ ಕಡಿವಾಣ ಹಾಕಲಾಗದೆ ಕೃಷಿಕರ ಬೆಳೆ ಮಣ್ಣು ಪಾಲಾಗಿದೆ ಎಂದು ಈ ಭಾಗದ ರೈತರು ಆತಂಕ ವ್ಯಕ್ತ ಪಡಿಸಿದ್ದಾರೆ.