ಮಡಿಕೇರಿ, ಆ. 15:-ಕರ್ನಾಟಕ ಸರ್ಕಾರದ ರಾಜ್ಯ ವಲಯ ಯೋಜನೆಯಡಿ, ಎಲ್ಲಾ ವಿಧದ ಸಹಕಾರ ಸಂಘಗಳಲ್ಲಿ ಅರ್ಹ ಜನರನ್ನು ಸದಸ್ಯರನ್ನಾಗಿ ನೋಂದಾಯಿಸುವ ಯೋಜನೆಯು ಜಾರಿಯಲ್ಲಿದ್ದು, ಈ ಯೋಜನೆಯಡಿಯಲ್ಲಿ ಪ.ಜಾತಿ-ಪ.ಪಂಗಡ, ಹಿಂದುಳಿದ ವರ್ಗ ಮತ್ತು ಅಲೆಮಾರಿ ಜನಾಂಗದವರು, ಅಲ್ಪಸಂಖ್ಯಾತರು, ವಿಶೇಷಚೇತನರು, ಮಹಿಳೆಯರು ಎಲ್ಲಾ ವಿಧದ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಲು ಅವಕಾಶವಿರುತ್ತದೆ. ಅಲ್ಲದೇ, ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸದಸ್ಯರನ್ನಾಗಿ ನೋಂದಾಯಿಸಲು ಅವಕಾಶ ಇರುತ್ತದೆ. ಪ್ರತಿ ಅರ್ಹ ಹೊಸ ಸದಸ್ಯರ ಬಾಬ್ತು ಗರಿಷ್ಠ ರೂ. 500 ಗಳನ್ನು ಷೇರು ಧನವನ್ನು ಸರ್ಕಾರದಿಂದ ಸಂಬಂಧಪಟ್ಟ ಸಂಘಕ್ಕೆ ನೇರವಾಗಿ ಪಾವತಿಸಲಾಗುತ್ತದೆ.
ಸಂಘಗಳಲ್ಲಿ ಸದಸ್ಯತ್ವ ಹೊಂದದೇ ಇರುವ ಅರ್ಹ ಜನರು ತಾವು ವಾಸಿಸುವ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ಇನ್ನಿತರ ಯಾವುದೇ ಸಂಘಕ್ಕೆ ಭೇಟಿ ನೀಡಿ ಅಗತ್ಯ ಅರ್ಜಿ, ದಾಖಲಾತಿಗಳನ್ನು ಸಲ್ಲಿಸಿ, ಸಂಘದಲ್ಲಿ ಸದಸ್ಯತ್ವವನ್ನು ಪಡೆಯುವುದರ ಮೂಲಕ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಸಂಘದಲ್ಲಿ ಸದಸ್ಯತ್ವ ಪಡೆಯುವ ಮೂಲಕ ಆರ್ಥಿಕ, ಸಾಮಾಜಿಕ ಸಬಲತೆಯನ್ನು ಪಡೆಯಲು ಸಾಧ್ಯವಾಗುತ್ತದೆ.
ಅಗತ್ಯವಿರುವ ದಾಖಲಾತಿಗಳು ಜಾತಿ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಅಗತ್ಯವಿದ್ದಲ್ಲಿ ವಾಸ ದೃಢೀಕರಣ ಪತ್ರ, ಆದಾಯ ದೃಢೀಕರಣ, ಬಿಪಿಎಲ್ ಕಾರ್ಡ್ ಆಧಾರದ ಮೇಲೆ ನೋಂದಣಿ ಆಗುವುದಾದರೆ ಬಿಪಿಎಲ್ ಕಾರ್ಡ್, ಸಂಬಂಧಪಟ್ಟ ಸಂಘವು ಅಪೇಕ್ಷಿಸುವ ಇತರ ದಾಖಲಾತಿಗಳು, ಹಾಗೂ ಷರತ್ತುಗಳು ಅನ್ವಯಿಸುತ್ತದೆ.
ಹೆಚ್ಚಿನ ಮಾಹಿತಿಗೆ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಎಂ.ಈ. ಮೋಹನ್, ಸೋಮವಾರಪೇಟೆ ತಾಲೂಕು 9880233270, ಎಂ.ಎಸ್. ಮೋಹನ್, ವೀರಾಜಪೇಟೆ ತಾಲೂಕು 9449183761 ಮತ್ತು ಪಿ.ಬಿ. ಮೋಹನ್ ಕುಮಾರ್, ಮಡಿಕೇರಿ ತಾಲೂಕು 7019055660ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಹೆಚ್.ಡಿ. ರವಿಕುಮಾರ ತಿಳಿಸಿದ್ದಾರೆ.