ವೀರಾಜಪೇಟೆ,ಆ. 15: ಚೀನಾದ ಕುತಂತ್ರ ಗಡಿ ಸಂಘರ್ಷದ ವಿರುದ್ಧ ಹೋರಾಡಲು ದೇಶದ ಯೋಧರು ಸೇರಿದಂತೆ ಕೊಡಗಿನ ಯೋಧರು ಕೂಡ ತೊಡಗಿರುವುದು ಕೊಡಗಿಗೆ ಹೆಮ್ಮೆ ತರುವ ಸಂಗತಿಯಾಗಿದೆ ಎಂದು ತಹಶೀಲ್ದಾರ್ ಎಲ್.ಎಂ. ನಂದೀಶ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತದ ವತಿಯಿಂದ ಇಲ್ಲಿನ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ 74ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಪ್ರಸ್ತುತ ಕೊರೊನಾ ವೈರಸ್ ಭಾರತೀಯರನ್ನು ಎಡೆ ಬಿಡದೆ ಕಾಡುತ್ತಿದೆ. ಕೊರೊನಾ ವೈರಸ್‍ನಿಂದ ಹೊರ ಬರಲು ಭಾರತೀಯರಾದ ನಾವುಗಳು ಒಮ್ಮತವಾಗಿ ಹೋರಾಡಿ ಭಾರತ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ ಎಂದರು.
ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕ ಎಂ.ಎನ್. ಹೇಮಂತ್ ಕುಮಾರ್ ಮಾತನಾಡಿ ಭಾರತೀಯರು ಜ್ಞಾನದ ಬಲದಿಂದ ವಿಶ್ವದ ಹೃದಯವನ್ನು ಗೆದ್ದವರು. ನಮ್ಮ, ಜಾತಿ, ಮತ ಜನಾಂಗ, ಆಲೋಚನೆಗಳು ಬೇರೆ ಬೇರೆ ಇರಬಹುದು, ಆದರೆ ನಾವೆಲ್ಲರೂ ಸ್ವತಂತ್ರ ಭಾರತದ ಹೆಮ್ಮೆಯ ಭಾರತೀಯರು ಎಂದು ಹೇಳಿದರು. ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮೀತಾ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಡಿವೈಎಸ್‍ಪಿ ಸಿ.ಟಿ. ಜಯಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ತಾಲೂಕು ವೈದ್ಯಾಧಿಕಾರಿ ಡಾ ಯತಿರಾಜ್, ಪಿಡಬ್ಲ್ಯೂಡಿ ಅಭಿಯಂತರ ಸುರೇಶ್, ವೃತ್ತ ನಿರೀಕ್ಷಕ ಕ್ಯಾತೆಗೌಡ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್, ಮಾಜಿ ಸೈನಿಕರ ಸಂಘದ ಚೇಂದ್ರಿಮಾಡ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಮಾರಂಭದಲ್ಲಿ ಕೋವಿಡ್ ವಾರಿಯರ್ಸ್‍ಗಳಾದ ಡಾ:ಯತಿರಾಜ್, ಡಾ ರೇವಣ್ಣ, ಡಾ ಅರ್ಚನಾ, ಪೂಜಾ, ಕೈರುನ್ನಿಸಾ, ನಳಿನಿ, ಪಿ.ಜಿ. ಸುಬ್ರಮಣಿ, ರಘು, ಕಿರಣ್, ಈಶ್ವರಿ, ಸರಸ್ವತಿ, ಎಚ್.ಜಿ.ಮುರುಗ ಹಾಗೂ ಎಚ್.ಎಸ್.ಸುಬ್ರಮಣಿ ಇವರುಗಳನ್ನು ಸನ್ಮಾನಿಸಲಾಯಿತು.
ವೀರಾಜಪೇಟೆ ತಾಲೂಕು ಕಚೇರಿಯ ಶಿರಸ್ತೆದಾರ್ ಎಚ್.ಕೆ.ಪೊನ್ನು, ರೆವಿನ್ಯೂ ಇನ್ಸ್‍ಪೆಕ್ಟರ್ ಪಳಂಗಪ್ಪ ಪ್ರಕಾಶ್ ಸಿಬ್ಬಂದಿಗಳು ಹಾಜರಿದ್ದರು. ವೀರಾಜಪೇಟೆ ಶಿಕ್ಷಣ ಕಚೇರಿಯ ಸಹಾಯಕ ಅಧಿಕಾರಿ ಬಿಂದು ಸ್ವಾಗತಿಸಿದರು. ಅಮ್ಮತ್ತಿ ಒಂಟಿಯಂಗಡಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಎ.ವಿ.ಮಂಜುನಾಥ್ ಅವರು ನಿರೂಪಿಸಿ ವಂದಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಗೈರು ಹಾಜರಿಯಲ್ಲಿ ಕೆಲ ಸಾರ್ವಜನಿಕರು ಪಾಲ್ಗೊಂಡಿದ್ದಾರೆ.