ಮಡಿಕೇರಿ, ಆ. 15: ಉಮೇಶ್ ಗೋಪಿನಾಥ್ ಜಾಧವ್ ಬೆಂಗಳೂರಿನಲ್ಲಿ ಸಂಗೀತ ಶಾಲೆ ನಡೆಸುತ್ತಿದ್ದಾರೆ. ಒಮ್ಮೆ ಹೊರ ರಾಜ್ಯದಲ್ಲಿ ಕಾರ್ಯಕ್ರಮ ನೀಡಿ ವಿಮಾನ ಏರಲು ಏರ್‍ಪೋರ್ಟ್‍ನಲ್ಲಿ ಕುಳಿತಿದ್ದರು. ಅಲ್ಲಿನ ಟಿವಿಯಲ್ಲಿ ‘‘ಬ್ರೇಕಿಂಗ್ ನ್ಯೂಸ್’’ ಬಿತ್ತರವಾಯಿತು. ‘‘ಪುಲ್ವಾಮಾದಲ್ಲಿ ಪಾಕ್ ಪ್ರಚೋದಿತರಿಂದ 40 ಯೋಧರ ಹತ್ಯೆ’’!

ಯೋಧರ ಸಾವಿನ ಸುದ್ದಿ ಜಾಧವ್ ಹೃದಯ ಹಿಂಡಿತು. ದೇಶಾಭಿಮಾನ ಸ್ಫುರಿಸಿತು. ತನ್ನ ಮನದಲ್ಲೇ ಇಷ್ಟು ನೋವಾದರೆ, ಹುತಾತ್ಮರುಗಳ ಕುಟುಂಬದ ನೋವು ಹೇಗಿರಬಹುದು ಎಂದು ಚಿಂತಿಸಿದ ಜಾಧವ್, ಆ ಎಲ್ಲಾ ಕುಟುಂಬಗಳಿಗೆ ಭೇಟಿ ನೀಡುವ ತೀರ್ಮಾನ ಮಾಡಿದರು.

ಇಂದು ಮಡಿಕೇರಿಯಲ್ಲಿ ಹುತಾತ್ಮರುಗಳ ಸ್ಮಾರಕಕ್ಕೆ ನಿವೃತ್ತ ಸೇನಾ ಅಧಿಕಾರಿಗಳೊಂದಿಗೆ ಜಾಧವ್ ಕೂಡಾ ಹೂಗುಚ್ಛ ಅರ್ಪಿಸಿ ನಮಿಸಿದರು. ಫೀ.ಮಾ.ಕೆ.ಎಂ. ಕಾರ್ಯಪ್ಪ ಅವರ ಗೃಹ, ರೋಷನಾರದ ಹಿಡಿ ಮಣ್ಣನ್ನು ಅವರಿಗೆ ಅರ್ಪಿಸಲಾಯಿತು.

ಜಾಧವ್ ಇದೀಗ ರಾಷ್ಟ್ರದ 16 ರಾಜ್ಯಗಳಿಗೆ ಖುದ್ದು ಭೇಟಿ ನೀಡುತ್ತಿದ್ದಾರೆ. ಈಗಾಗಲೇ ತಮಿಳುನಾಡು, ಗೋವಾ, ಪಾಂಡಿಚೇರಿ, ಮಧ್ಯಪ್ರದೇಶ ಹಾಗೂ ಇತರೆಡೆಗಳಿಗೆ ತೆರಳಿ ಹುತಾತ್ಮರ ಕುಟುಂಬಗಳನ್ನು ಭೇಟಿ ಆಗಿದ್ದಾರೆ. ಹುತಾತ್ಮರು ಹುಟ್ಟಿದ ಸ್ಥಳ ಹಾಗೂ ಅವರ ಅಂತ್ಯಕ್ರಿಯೆ ನಡೆದ ಸ್ಥಳಗಳಿಂದ ಮಣ್ಣನ್ನು ಸಂಗ್ರಹಿಸಿದ್ದಾರೆ. ಹೀಗೆ ಪ್ರತಿ ರಾಜ್ಯ, ಜಿಲ್ಲೆ, ಗ್ರಾಮಗಳಲ್ಲಿ ಬೆಳೆದ 40 ಹುತಾತ್ಮ ಯೋಧರ ಸ್ಥಳದ ಪವಿತ್ರ ಮಣ್ಣನ್ನು ಸಂಗ್ರಹಿಸಿ ಪುಲ್ವಾಮಕ್ಕೆ ತೆರಳಿ, ಅಲ್ಲಿ ಆ ಮಣ್ಣನ್ನು ಬಳಸಿ ಭಾರತದ ನಕ್ಷೆ ಮಾಡುವ ವಿಶೇಷ ಚಿಂತನೆ ಜಾಧವ್ ಅವರದ್ದು.

ಒಂದು ‘ಸಿಡಾನ್‘ ಕಾರನ್ನೇ ಚಲಿಸುವ ಮನೆಯಂತೆ, ಹಾಸಿಗೆ, ಪಾತ್ರೆ, ಸ್ಟೌವ್ ಇತ್ಯಾದಿ ಹೊಂದಿಸಿಕೊಂಡು ಓಡಾಡುತ್ತಿರುವ ಜಾಧವ್ ಕೋವಿಡ್ ಬೆದರಿಕೆಗೂ ಜಗ್ಗದೆ ‘ಆಪರೇಷನ್ ಪುಲ್ವಾಮ’ ಮುಂದುವರಿಸಿದ್ದಾರೆ. ಸಿಡಾನ್ ಜೊತೆ ಮತ್ತೊಂದು ಕಾರೂ ಅವರನ್ನು ಹಿಂಬಾಲಿಸುತ್ತಿದ್ದು, ಕತ್ತಲಾದಾಗ ಸಿಗುವ ಪೆಟ್ರೋಲ್ ಬಂಕ್ ಅಥವಾ ಪ್ರಶಸ್ತ ಸ್ಥಳಗಳೇ ಅವರಿಗೆ ಅಂದಿನ ತಂಗುದಾಣ. ಬದಲಾವಣೆ ಮಾಡಿರುವ ಕಾರನ್ನು ದೇಶಭಕ್ತಿ ಮೂಡಿಸುವಂತೆ ಸೇನಾ ಫಲಕ ಇತ್ಯಾದಿ ಅಳವಡಿಸಿ ಅಲಂಕರಿಸಲಾಗಿದೆ.