ಗೋಣಿಕೊಪ್ಪ ವರದಿ, ಆ. 15 : ಸಾಮೂಹಿಕ ನಾಯಕತ್ವದ ರೈತ ಸಂಘ, ಹಸಿರು ಸೇನೆ ವತಿಯಿಂದ ರಾಜ್ಯ ಸರ್ಕಾರದ ಭೂಸುಧಾರಣೆ ಕಾಯ್ದೆ ವಿರೋಧಿಸಿ ಇಲ್ಲಿನ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ಮೂಲಕ ಕರಾಳ ದಿನಾಚರಣೆ ನಡೆಯಿತು. ರಾಷ್ಟ್ರಧ್ವಜ ಹಿಡಿದು, ಕಪ್ಪುಪಟ್ಟಿ ಕಟ್ಟಿಕೊಂಡು ರೈತರು ಪಾಲ್ಗೊಂಡು, ಕಾಯ್ದೆ ಅನುಷ್ಠಾನ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಶನಿವಾರ ನೂರಾರು ರೈತರು ಬಸವೇಶ್ವರ ದೇವಸ್ಥಾನದಿಂದ ಗಾಂಧಿ ಪ್ರತಿಮೆವರೆಗೆ ಮೌನ ಮೆರವಣಿಗೆ ಮೂಲಕ ಆಗಮಿಸಿ ಭೂಸುಧಾರಣೆ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರು.

ರೈತನಿಗೆ ಭೂಮಿ ಹಕ್ಕು ವಿಚಾರದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ, ನಮ್ಮ ಭೂಮಿ ನಮ್ಮ ಹಕ್ಕು, ಕೃಷಿ ಭೂಮಿ ಬಂಡಾವಾಳಶಾಯಿ ಪಾಲಾಗಲಿದೆ, ಇಂತಹ ಕಾನೂನು ಜಾರಿ ಮಾಡುತ್ತಿರುವ ಸರ್ಕಾರಕ್ಕೆ ದಿಕ್ಕಾರ ಎಂಬ ಘೋಷಣೆಗಳು ಫಲಕದಲ್ಲಿ ವ್ಯಕ್ತಗೊಂಡಿತು. ಬಸವೇಶ್ವರನಿಗೆ ಪೂಜೆ ಸಲ್ಲಿಸಿ, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಮಾಧ್ಯಮದೊಂದಿಗೆ ಸಾಮೂಹಿಕ ನಾಯಕತ್ವದ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಮಾತನಾಡಿ, ಭೂಸುಧಾರಣೆ ಕಾಯ್ದೆ ರೈತ ವಿರೋಧಿ ನೀತಿಯಾಗಿದ್ದು, ಭೂಮಾಫಿಯಾಕ್ಕೆ ನಮ್ಮ ಕೃಷಿ ಭೂಮಿ ಒಳಗಾಗುವ ಆತಂಕವಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಳ್ಳಿಚಂಡ ಧನು, ಸಂಚಾಲಕ ಬಾದುಮಂಡ ಮಹೇಶ್, ಪಾಲಂಗಾಲ ಹೋಬಳಿ ಅಧ್ಯಕ್ಷ ಚಾತಂಡ ಗಿರೀಶ್, ಗ್ರಾಮ ಘಟಕ ಅಧ್ಯಕ್ಷ ಕರಿನೆರವಂಡ ಜಿತನ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಚಿಮ್ಮಣಮಾಡ ಪೊನ್ನಪ್ಪ ಇದ್ದರು.