ನಮಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ನಿಯಮಾನುಸಾರ ನಾವು ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕಾಗುತ್ತದೆ, ಮಡದಿ ಮಕ್ಕಳೊಂದಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಫಲಿತಾಂಶ ಬಂತು. ಹಾಗಾಗಿ ಆರಂಭದಲ್ಲಿ ಒಂದು ರೀತಿಯ ಆತಂಕ ಕಾಡಿತ್ತು ಎಂದು ಕೇಂದ್ರ ಮೀಸಲು ಪಡೆಯ ಉದ್ಯೋಗಿ 46ರ ಹರೆಯದ ನಿಂಗಪ್ಪ ಹೇಳಿದರು.
ಮಡದಿ ಹಾಗೂ ಇಬ್ಬರು ಮಕ್ಕಳೊಂದಿಗೆ ದೆಹಲಿಯಲ್ಲಿ ಕರ್ತವ್ಯದಲ್ಲಿದ್ದ ನಿಂಗಪ್ಪ ಅವರು ಕಾರ್ಯನಿಮಿತ್ತ ಜೂನ್ ತಿಂಗಳಿನಲ್ಲಿ ರಜೆಯ ಮೇಲೆ ಕೊಡಗಿಗೆ ಬಂದಿದ್ದರು. ಬೆಂಗಳೂರು ಮಾರ್ಗವಾಗಿ ಮಡದಿಯ ತವರಾದ ಹುಲಸೆ ಗ್ರಾಮಕ್ಕೆ ಆಗಮಿಸುವ ಸಂದರ್ಭ ಹೆಬ್ಬಾಲೆಯಲ್ಲಿ ಸಹಜವಾಗಿಯೇ ಕೊರೊನಾ ಪರೀಕ್ಷೆಗೆ ಒಳಗಾಗಬೇಕಾಗಿ ಬಂತು. ಆರೋಗ್ಯ ಸಿಬ್ಬಂದಿಗಳ ಹಾಗೂ ಅಧಿಕಾರಿಗಳ ನಿರ್ದೇಶನದಂತೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾದ ನಿಂಗಪ್ಪ ಮತ್ತು ಸಂಸಾರ, ಗಂಟಲ ದ್ರವ ಪರೀಕ್ಷೆಗೆ ಒಳಗಾದಾಗ ಎಲ್ಲರಿಗೂ ಪಾಸಿಟಿವ್ ಪಲಿತಾಂಶ ಬಂದಿತ್ತು. ಈ ಸಂದರ್ಭದಲ್ಲಿ ಗಾಬರಿ ಸಹಜವಾದರೂ ಯೋಧನಾದ ನಿಂಗಪ್ಪ ಎದೆಗುಂದಲಿಲ್ಲ. ಏನು ಆಗಲ್ಲ ಎಂದು ಮಡದಿ ಮಕ್ಕಳಿಗೆ ಧೈರ್ಯ ಹೇಳಿದರು. ರೋಗಿಗಳಿಗೆ ನೀಡುವ ಆಸ್ಪತ್ರೆಯ ಚಿಕಿತ್ಸೆ, ಆರೈಕೆ ಮುಂದುವರಿಯಿತು.
ಮತ್ತೆ ನೆಗೆಟಿವ್ ವರದಿ ಬರಬೇಕಾದರೆ 18 ದಿನಗಳ ಕಾಲ ನಾವು ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು ಎಂದು ಹೇಳಿದ ನಿಂಗಪ್ಪ, ಆಸ್ಪತ್ರೆಯಲ್ಲಿ ಡಾ. ಮಹೇಶ್ ಸೇರಿದಂತೆ ಎಲ್ಲ ಸಿಬ್ಬಂದಿಗಳು ಯಾವುದೇ ನಿರ್ಲಕ್ಷ್ಯ ಮಾಡದೆ ಬಹಳ ಚೆನ್ನಾಗಿ ನೋಡಿಕೊಂಡರು. ತಾನು ಮತ್ತೆ ದೇಶಸೇವೆಯ ಕರ್ತವ್ಯದಲ್ಲಿ ತೊಡಗಿಸಿಕೊಂಡೆ ಎಂದು ತಮ್ಮ ಕೊರೊನಾ ಅನುಭವವನ್ನು ‘ಶಕ್ತಿ’ಯೊಂದಿಗೆ ಹೇಳಿಕೊಂಡರು. ಸರ್ಕಾರದ ಸಕಾಲಿಕ ಸೂಚನೆಗಳನ್ನು ಪಾಲಿಸಿದ್ದೇ ಆದಲ್ಲಿ ನಾವು ಕೊರೊನಾದಂತಹ ಮಹಾಮಾರಿಯ ಹಿಡಿತಕ್ಕೆ ಸಿಲುಕದೆ ಪಾರಾಗಬಹುದು ಎಂದು ನಿಂಗಪ್ಪ ಹೇಳಿದರು.