ಮೂವರಿಗೆ ಶೌರ್ಯ ಚಕ್ರ ಪ್ರಶಸ್ತಿ
ನವದೆಹಲಿ, ಆ. 14: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಮೂವರಿಗೆ ಶೌರ್ಯ ಚಕ್ರ ಸೇರಿದಂತೆ ಸೈನ್ಯದ ಶೌರ್ಯ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ವಿಶಾಖ್ ನಾಯರ್ ಅವರಿಗೆ ಶೌರ್ಯ ಚಕ್ರ ಗೌರವ ಸಂದಿದೆ. ಇದರೊಡನೆ ಲೆಫ್ಟಿನೆಂಟ್ ಕರ್ನಲ್ ಕ್ರಿಶನ್ ಸಿಂಗ್ ರಾವತ್, ಮೇಜರ್ ಅನಿಲ್ ಅರಸ್ ಹಾಗೂ ಹವಾಲ್ದಾರ್ ಅಲೋಕ್ ಕುಮಾರ್ ದುಬೆ.ಸೇನೆಯಲ್ಲಿದ್ದು ಶೌರ್ಯ ಚಕ್ರ ಗೌರವಕ್ಕೆ ಪಾತ್ರವಾದ ಮೂವರು ವೀರರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜಿಸಲಾದ ಮಿಷನ್ ಆಧಾರಿತ ತಂಡದ ನಾಯಕರಾಗಿ ಎದುರಾಳಿಗಳ ಒಳನುಸುಳುವಿಕೆ ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳಿಗೆ ದಿಟ್ಟ ಉತ್ತರ ನೀಡಿದ್ದ ಲೆಫ್ಟಿನೆಂಟ್ ಕರ್ನಲ್ ಕೆ.ಎಸ್. ರಾವತ್‍ಗೆ ಸೇನಾ ಪದಕ ನೀಡಲಾಗಿದೆ.
ಗಂಟಲ ದ್ರವ ಪರೀಕ್ಷೆ ದರ ಇಳಿಕೆ
ಬೆಂಗಳೂರು, ಆ. 14: ಗಂಟಲು ದ್ರವ ಪರೀಕ್ಷೆ ದರವನ್ನು ಇಳಿಕೆ ಮಾಡಲು ಟಾಸ್ಕ್‍ಫೋರ್ಸ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸ್ವಾಬ್‍ಟೆಸ್ಟ್ ದರವನ್ನು 2,000 ರೂ. ದಿಂದ 1500 ರೂ.ಗೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಯಲ್ಲಿ 3000 ಇದ್ದ ದರವನ್ನು 2500 ರೂ. ಗೆ ಇಳಿಸಲಾಗಿದೆ.
ಎರಡು ಸಾವಿರ ವೈದ್ಯರ ನೇಮಕ
ಬೆಂಗಳೂರು, ಆ. 14: ಇನ್ನೊಂದು ವಾರದಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಕನಿಷ್ಟ ಎರಡು ಸಾವಿರ ವೈದ್ಯರು ಹೆಚ್ಚುವರಿಯಾಗಿ ಲಭ್ಯರಾಗಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಒಂದೆರಡು ದಿನಗಳಲ್ಲಿ ಸ್ನಾತಕ, ಸ್ನಾತಕೋತ್ತರ ವೈದ್ಯ ಪದವಿ ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಇಂಟರ್ನಿ ವಿದ್ಯಾರ್ಥಿಗಳು ಕೊರೊನಾ ಸೋಂಕಿತರ ಚಿಕಿತ್ಸೆ ನೀಡಲು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದಿದ್ದಾರೆ.
ಉಗ್ರರ ಅಡಗುತಾಣ ಪತ್ತೆ
ಬಾರಾಮುಲ್ಲಾ, ಆ. 14: ಉತ್ತರ ಕಾಶ್ಮೀರ ಜಿಲ್ಲೆಯಾದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ಉಗ್ರರ ಅಡಗುತಾಣ ಪತ್ತೆ ಮಾಡಿ, ಸ್ಥಳದಿಂದ ಗ್ರೆನೇಡ್, ಪಿಸ್ತೂಲ್, ಸ್ಫೋಟಕ ವಸ್ತುಗಳು ಮತ್ತು ಪಾಕ್ ಕರೆನ್ಸಿ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಸೇನೆ ತಾ. 11 ರಂದು ಬಾರಾಮುಲ್ಲಾದ ಟ್ರೆನೇರಿಯನ್ ಡೋಗಿ ಪಹಾಡ್‍ನಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ತೀವ್ರ ಶೋಧ ನಡೆಸಿದ ನಂತರ, ಸೇನೆ ಕೊನೆಗೆ ಗುರುವಾರ ಉಗ್ರರ ಅಡಗುತಾಣ ಪತ್ತೆಹಚ್ಚಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಭಾರೀ ಸಂಗ್ರಹವನ್ನು ವಶಪಡಿಸಿಕೊಂಡಿದೆ.
ಎಸ್‍ಪಿಬಿ ಆರೋಗ್ಯ ಸ್ಥಿತಿ ಗಂಭೀರ
ಚೆನ್ನೈ, ಆ. 14: ಮಹಾಮಾರಿ ಕೊರೊನಾಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ. ತಾ. 5 ರಿಂದ 74 ವರ್ಷದ ಎಸ್‍ಪಿಬಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ರಾತ್ರಿ ಅವರ ಆರೋಗ್ಯ ಗಂಭೀರವಾಗಿತ್ತು. ಈ ಹಿನ್ನೆಲೆ ಅವರನ್ನು ಐಸಿಯುಗೆ ಸ್ಥಳಾಂತರಿಸಿ ಲೈಫ್ ಸಪೋರ್ಟ್ ಅಳವಡಿಸಲಾಗಿದೆ. ಈ ಹಿಂದೆ ಕೊರೊನಾಗೆ ತುತ್ತಾಗಿದ್ದಾಗ ಅವರು ವೀಡಿಯೋ ಮಾಡಿ ನನ್ನ ಕುಟುಂಬದ ಹಿತದೃಷ್ಟಿಯಿಂದ ನಾನು ಸ್ವಯಂ ಆಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಯೊಂದಿಗೆ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದರು.