ಸುಂಟಿಕೊಪ್ಪ, ಆ. 14: ನದಿ ತಟ್ಟದಲ್ಲಿ ಮನೆ ನಿರ್ಮಿಸಿಕೊಂಡು ಹಲವಾರು ದಶಕಗಳಿಂದ ನೆಲೆಸಿರುವ ಬಡಕೂಲಿ ಕಾರ್ಮಿಕರು ಅಲ್ಲಿಂದ ಮನೆ ತೆರವುಗೊಳಿಸಲು ಮುಂದೆ ಬಂದರೆ ಅವರಿಗೆ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಕುಟ್ಟುಗೇರಿ ಪೈಸಾರಿ ಸಮೀಪ ನದಿ ದಡದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವುದು ಎಂದಿಗೂ ಅಪಾಯವೇ. ಅದನ್ನು ಮನಗಂಡು ಅಲ್ಲಿ ನೆಲೆಸಿರುವ ಕುಟುಂಬಸ್ಥರು ಮನಸ್ಸು ಬದಲಾಯಿಸಿ ತಮ್ಮ ಮುಂದಿನ ಭವಿಷ್ಯದ ದಿಸೆಯಲ್ಲಿ ಹೊರ ಬರಲು ತಯಾರಿದ್ದರೆ ಅವರಿಗೆ ಸರಕಾರದ ಸೂಕ್ತವಾದ ಸ್ಥಳದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ಆದರೆ ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಿ ತಮ್ಮ ಬೇಡಿಕೆಯನ್ನು ಮುಂದಿಡಬೇಕೆಂದು ಶಾಸಕರು ತಿಳಿಸಿದ್ದಾರೆ.